ನವದೆಹಲಿ (ಜೂ.29): ಆರಂಭದಲ್ಲಿ ನಿಯಂತ್ರಣದಲ್ಲಿದ್ದ ಕೊರೋನಾ ವೈರಸ್ ಲಾಕ್ಡೌನ್ ತೆರವುಗೊಳ್ಳುತ್ತಿದ್ದಂತೆ ಭಾರತದಲ್ಲಿ ರೌದ್ರ ನರ್ತನ ಆರಂಭಿಸಿದೆ. ಕೊರೋನಾ ಪ್ರಕರಣಗಳ ವಿಚಾರದಲ್ಲಿ ವಿಶ್ವಮಟ್ಟದಲ್ಲಿ ಎರಡು ತಿಂಗಳ ಹಿಂದೆ 14ನೇ ಸ್ಥಾನದಲ್ಲಿದ್ದ ಭಾರತ ಈಗ ನಾಲ್ಕನೇ ಸ್ಥಾನಕ್ಕೆ ಬಂದಿದೆ. ಇನ್ನು, ಕೆಲವೇ ದಿನಗಳಲ್ಲಿ ಮೂರನೇ ಸ್ಥಾನದಲ್ಲಿರುವ ರಷ್ಯಾವನ್ನು ಹಿಂದಿಕ್ಕುವ ಸಾಧ್ಯತೆ ಇದೆ ಎನ್ನಲಾಗಿದೆ.
ಲಾಕ್ಡೌನ್ ಅವಧಿಯಲ್ಲಿ ಭಾರತ ಸಶಕ್ತವಾಗಿ ಕೊರೋನಾ ವೈರಸ್ ನಿಯಂತ್ರಣ ಮಾಡಿತ್ತು. ಯಾವಾಗ ಅನ್ಲಾಕ್ ಪ್ರಕ್ರಿಯೆ ಆರಂಭವಾಗಿತ್ತೋ ಆಗ ಕೊರೋನಾ ವೈರಸ್ ಮಿತಿ ಮೀರಿ ಹರಡಲು ಆರಂಭವಾಗಿದೆ. ಈಗ ನಿತ್ಯ ಸಮಾರು 15-20 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ.
ಶನಿವಾರ ಒಂದೇ ದಿನ 20 ಸಾವಿರ ಕೊರೋನಾ ಪ್ರಕರಣ ದಾಖಲಾಗಿದೆ. ಭಾನುವಾರ 19,906 ಕೋವಿಡ್ ಕೇಸ್ ವರದಿಯಾಗಿದೆ. ಇದು ಹೀಗೆಯೇ ಮುಂದುವರಿದರೆ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ನಾವು ರಷ್ಯಾವನ್ನು ಹಿಂದಿಕ್ಕುವುದರಲ್ಲಿ ಯಾವುದೇ ಅನುಮಾನವಿಲ್ಲ.
ಸದ್ಯ ಭಾರತದಲ್ಲಿ, 5.49 ಲಕ್ಷ ಕೊರೋನಾ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 16 ಸಾವಿರ ಸಾವು ಸಂಭವಿಸಿದೆ. ಇನ್ನು, ರಷ್ಯಾದಲ್ಲಿ 6.34 ಲಕ್ಷ ಕೊರೋನಾ ಕೇಸ್ಗಳು ವರದಿ ಆಗಿವೆ. ರಷ್ಯಾಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾ ಮಿತಿಮೀರಿ ಹರಡುತ್ತಿದೆ. ಹೀಗಾಗಿ ಶೀಘ್ರವೇ ರಷ್ಯಾವನ್ನು ನಾವು ಹಿಂದಿಕ್ಕುವ ಸಾಧ್ಯತೆ ಇದೆ.
ಭಾರತದಲ್ಲಿ ಕೊರೋನಾ ಸಮುದಾಯಕ್ಕೆ ಹರಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡರೂ ಯಾವುದೇ ಅನುಮಾನವಿಲ್ಲ ಎಂಬುದು ತಜ್ಞರ ಅಭಿಪ್ರಾಯ.
Comments are closed.