ವಿಜಯವಾಡ: ನೆರೆಯ ಆಂಧ್ರ ಪ್ರದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರನ್ನು ಟ್ರಾಕ್ಟರ್ ಹಾಗೂ ಜೆಸಿಬಿ ಮೂಲಕ ಸ್ಮಶಾನಕ್ಕೆ ಸಾಗಿಸಲಾಗುತ್ತಿದೆ.ಶ್ರೀ ಕಾಕುಳಂ ಜಿಲ್ಲೆಯ ಪಾಲಾಸ ಪಟ್ಟಣದಲ್ಲಿ ಶುಕ್ರವಾರ ಇದೇ ರೀತಿಯ ಆಘಾತಕಾರಿ ಘಟನೆ ನಡೆದಿದೆ.
ಕೋವಿಡ್-19 ನಿಂದ ಮೃತಪಟ್ಟ ಮುನ್ಸಿಪಲ್ ನೌಕರನ ಮೃತದೇಹವನ್ನು ಜೆಸಿಬಿಯಲ್ಲಿ ಸ್ಮಶಾನಕ್ಕೆ ಕೊಂಡೊಯ್ಯಲಾಗಿದೆ. ಇದೊಂದು ಅಮಾನವೀಯ ಕೃತ್ಯ ಎಂದು ಕರೆದಿರುವ ಮೃತನ ಕುಟುಂಬ ಸದಸ್ಯರು, ಕೊರೋನಾ ಕಾಯಿಲೆಯಿಂದ ಮೃತಪಟ್ಟವರನ್ನು ಸ್ಮಶಾನಕ್ಕೆ ಸಾಗಿಸುವಲ್ಲಿ ಶಿಷ್ಟಾಚಾರ ಪಾಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬಗ್ಗೆ ಮಾಹಿತಿ ಪಡೆದ ಆಂಧ್ರಪ್ರದೇಶ ಸರ್ಕಾರದ ಅಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದು, ಆರೋಪಿಗಳ ವಿರುದ್ಧಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜೆ ನಿವಾಸ್ ಆದೇಶಿಸಿದ್ದಾರೆ.ಪಾಲಾಸ ಮುನ್ಸಿಪಲ್ ಕಮೀಷನರ್ ಟಿ ನಾಗೇಂದ್ರ ಕುಮಾರ್ ಮತ್ತು ನೈರ್ಮಲ್ಯ ಇನ್ಸ್ ಪೆಕ್ಟರ್ ಎನ್. ರಾಜೀವ್ ಅವರನ್ನು ಅಮಾನತುಮಾಡಲಾಗಿದೆ.
ಘಟನೆಯನ್ನು ಖಂಡಿಸಿರುವ ಟಿಡಿಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕೊರೋನಾದಿಂದ ಮೃತರಾದವರನ್ನು ಪ್ಲಾಸ್ಟಿಕ್ ನಿಂದ ಸುತ್ತಿ ಜೆಸಿಬಿ ಹಾಗೂ ಟ್ರಾಕ್ಟರ್ ಮೂಲಕ ಸಾಗಿಸುತ್ತಿರುವುದು ತೀವ್ರ ಆಘಾತಕಾರಿಯಾಗಿದೆ. ಸತ್ತ ಮೇಲೂ ಅವರಿಗೆ ಗೌರವ ನೀಡಬೇಕಾಗಿದೆ. ವೈಎಸ್ ಜಗನ್ ಸರ್ಕಾರ ಅಮಾನವೀಯವಾಗಿ ವರ್ತಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಜೂನ್ 24ರಂದು ಇದೇ ಜಿಲ್ಲೆಯಲ್ಲಿ ಕೋವಿಡ್-19ನಿಂದ ಮೃತಪಟ್ಟಿದ್ದ ಮಹಿಳೆಯೊಬ್ಬರ ಶವವನ್ನು ಟ್ರಾಕ್ಟರ್ ನಲ್ಲಿ ಸ್ಮಶಾನಕ್ಕೆ ಕೊಂಡೊಯ್ಯಲಾಗಿತ್ತು.
Comments are closed.