ನವದೆಹಲಿ: ಲಡಾಖ್ ಗಡಿಯಲ್ಲಿ ನಡೆದ ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಈ ವಿಚಾರವಾಗಿ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದು,ಸೈನಿಕರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಮಾರಕ ಕೊರೋನಾ ವೈರಸ್ ನಿರ್ವಹಣೆ ವಿಚಾರವಾಗಿ ನಿನ್ನೆಯಿಂದ ನಡೆಯುತ್ತಿರುವ ಎಲ್ಲ ರಾಜ್ಯಗಳ ಸಿಎಂಗಳ ಮ್ಯಾರಥಾನ್ ಸಭೆಯ 2ನೇ ದಿನ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಮೊದಲು ಹುತಾತ್ಮ ಸೈನಿಕರಿ ಆತ್ಮಕ್ಕೆ 2 ನಿಮಿಷ ಶಾಂತಿ ಕೋರಿದರು. ಬಳಿಕ ಸೈನಿಕರ ಬಲಿದಾನದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ‘ಭಾರತ ಶಾಂತಿಯನ್ನು ಬಯಸುತ್ತದೆ ಆದರೆ ಪ್ರಚೋದಿಸಿದಾಗ, ಯಾವುದೇ ರೀತಿಯ ಪರಿಸ್ಥಿತಿ ಇರಲಿ ಭಾರತ ಅದಕ್ಕೆ ಸೂಕ್ತ ತಿರುಗೇಟು ನೀಡಲು ಸಮರ್ಥವಾಗಿದೆ. ಈ ಮೂಲಕ ನಾನು ದೇಶದ ಪ್ರಜೆಗಳಿಗೆ ಭರವಸೆ ನೀಡುತ್ತೇನೆ. ಅದೇನೆಂದರೆ ಸೈನಿಕರ ಬಲಿದಾನ ವ್ಯರ್ಥವಾಗದು. ನಮಗೆ, ದೇಶದ ಏಕತೆ ಮತ್ತು ಸಾರ್ವಭೌಮತ್ವ ಅತ್ಯಂತ ಮುಖ್ಯವಾದದ್ದು. ಆದಕೆ ಪ್ರಚೋದಿಸಿದರೆ ಅದಕ್ಕೆ ತಕ್ಕ ಶಾಸ್ತಿ ಖಂಡಿತ ಮಾಡುತ್ತೇವೆ ಎಂದು ಹೇಳಿದರು.
ಲಡಾಖ್ ನಲ್ಲಿ ವೀರಮರಣವನ್ನಪ್ಪಿದ ಸೈನಿಕರ ಶೌರ್ಯ ಅಪ್ರತಿಮವಾದದ್ದು. ಅವರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ಈ ಬಗ್ಗೆ ಯಾರಿಗೂ ಸ್ವಲ್ಪವೂ ಅನುಮಾನ ಬೇಡ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇನ್ನು ಇಂದಿನ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 15 ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
Comments are closed.