ಚೆನ್ನೈ: ತಮಿಳುನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಮಾರಕ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಚೆನ್ನೈ ಮತ್ತು ಪಕ್ಕದ ಪ್ರದೇಶಗಳನ್ನು ಜೂನ್ 19ರಿಂದ 30ರವರೆಗೆ ಲಾಕ್ಡೌನ್ ಮಾಡಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ. ಜೊತೆಗೆ ಎರಡು ಭಾನುವಾರಗಳನ್ನು ಪೂರ್ಣಪ್ರಮಾಣದಲ್ಲಿ ಶಟ್ಡೌನ್ಗೊಳಿಸಿದ್ದಾರೆ.
ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಸಿಗದೆ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ವೈದ್ಯಕೀಯ ಸಮಿತಿ ತಜ್ಞರೊಂದಿಗೆ ಹಲವು ಸುತ್ತಿನ ಸಭೆ ನಡೆಸಿ, ಅವರು ನೀಡಿದ ಶಿಫಾರಸ್ಸಿನಂತೆ ಈ ತೀರ್ಮಾನ ತೆಗೆದುಕೊಂಡಿದ್ದಾರೆ.
ಚೆನ್ನೈ ಮತ್ತು ಗ್ರೇಟರ್ ಚೆನ್ನೈ ಪೊಲೀಸರ ವ್ಯಾಪ್ತಿಗೆ ಬರುವ ಹಲವು ಪ್ರದೇಶಗಳಲ್ಲಿ ಸರ್ಕಾರ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿದೆ. ಹಾಗೆಯೇ ತಿರುವಳ್ಳೂರು, ಚೆಂಗಲ್ಪೆಟ್ ಮತ್ತು ಕಂಚಿಪುರಂ ಜಿಲ್ಲೆಗಳಲ್ಲಿ ಜೂನ್ 19ರಿಂದ 30ರವರೆಗೆ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿದೆ.
12 ದಿನಗಳ ಲಾಕ್ಡೌನ್ ಅವಧಿಯಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ನಿಬಂಧನೆಗಳೊಂದಿಗೆ ಅವಕಾಶ ನೀಡಲಾಗಿದೆ. ಮತ್ತು ಜೂನ್ 21 ಮತ್ತು ಜೂನ್ 28ರ ಭಾನುವಾರ ಪೂರ್ಣಪ್ರಮಾಣದಲ್ಲಿ ಶಟ್ಡೌನ್ ಜಾರಿಯಲ್ಲಿರಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ದಿನಸಿ, ತರಕಾರಿ ಮತ್ತು ಹಣ್ಣಿನ ಅಂಗಡಿಗಳು, ಪೆಟ್ರೋಲ್ ಬಂಕ್ಗಳು ಸೇರಿದಂತೆ ಅಗತ್ಯ ಸೇವೆಗಳು ಗುರುವಾರ ಮಧ್ಯರಾತ್ರಿಯಿಂದ ಮುಂದಿನ 12 ದಿನಗಳವರೆಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ತೆರೆದಿರುತ್ತವೆ. ಟೀ ಶಾಪ್ಗಳು ಮುಚ್ಚಲಿವೆ. ಹೋಟೆಲ್ಗಳಲ್ಲಿ ಬೆಳಗ್ಗೆ 6ರಿಂದ ಸಂಜೆ 8ರವರೆಗೆ ಪಾರ್ಸೆಲ್ಗೆ ಅವಕಾಶ ನೀಡಲಾಗಿದೆ. ಫುಡ್ ಡಿಲಿವರಿಗೆ ಅವಕಾಶ ನೀಡಲಾಗಿದೆ. ಆದರೆ, ಸಂಬಂಧಿತ ಉದ್ಯೋಗಿಗಳು ಕಡ್ಡಾಯವಾಗಿ ಐಡಿ ಕಾರ್ಡ್ ಹೊಂದಿರಲೇಬೇಕು ಎಂದು ಸೂಚನೆ ನೀಡಲಾಗಿದೆ.
Comments are closed.