ಹೊಸದಿಲ್ಲಿ: ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸೇರಿದ 108 ಘಟಕಗಳಲ್ಲಿ ಪಾಲಿಶ್ ಮಾಡಿದ ವಜ್ರಗಳು, ಬೆಳ್ಳಿ ಆಭರಣಗಳು ಸೇರಿದಂತೆ 1,350 ಕೋಟಿ ರೂ.ಗಳ ಮೌಲ್ಯದ ಮುತ್ತುಗಳನ್ನು ಹಾಂಕಾಂಗ್‌ನಿಂದ ಭಾರತಕ್ಕೆ ಮರಳಿ ತಂದಿರುವುದಾಗಿ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ತಿಳಿಸಿದೆ.
“ಈ ಸರಕುಗಳ ಮೌಲ್ಯವನ್ನು 1,350 ಕೋಟಿ ರೂ. (ಅಂದಾಜು) ಎಂದು ಘೋಷಿಸಲಾಗಿದೆ. ಈ ಬೆಲೆಬಾಳುವ ವಸ್ತುಗಳಲ್ಲಿ ನಯಗೊಳಿಸಿದ ವಜ್ರಗಳು, ಮುತ್ತುಗಳು, ಮುತ್ತು ಮತ್ತು ಬೆಳ್ಳಿ ಆಭರಣಗಳು ಸೇರಿವೆ. ಇವುಗಳನ್ನು ಹಾಂಕಾಂಗ್‌ನ ಲಾಜಿಸ್ಟಿಕ್ಸ್ ಕಂಪನಿಯ ಗೋಡೌನ್‌ನಲ್ಲಿ ಇರಿಸಲಾಗಿತ್ತು,” ಎಂದು ಏಜೆನ್ಸಿಯ ಅಧಿಕೃತ ಹೇಳಿಕೆ ತಿಳಿಸಿದೆ.
ಅಂದಾಜು 2,340 ಕೆಜಿ ತೂಕದ ಸರಕುಗಳನ್ನು ಬುಧವಾರ ಮುಂಬೈಗೆ ತರಲಾಗಿದೆ. ಭಾರತೀಯ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ವಂಚನೆಯ ಪ್ರಕರಣಗಳ ಸಂಬಂಧ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರು ಆಯಾ ಪ್ರಾಧಿಕಾರಿಗಳಿಗೆ ಬೇಕಾಗಿದ್ದಾರೆ. ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 23,780 ಕೋಟಿ ರೂ.ಗಳನ್ನು ವಂಚನೆ ಮಾಡಿದ್ದಾರೆ. ಇವರು ಸದ್ಯ ಲಂಡನ್‌ನಲ್ಲಿ ಜೈಲಿನಲ್ಲಿದ್ದಾರೆ. ಕಳೆದ ವರ್ಷ ಈತ ಸೆರೆಯಾಗಿದ್ದ.
ನೀರವ್ ಮೋದಿಯವರ ಸಂಬಂಧಿ ಮೆಹುಲ್ ಚೋಕ್ಸಿ ಅವರು ಪಂಜಾಬ್ ನ್ಯಾಷನಲ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಇವರು ಕೂಡ ಇದ್ದಾರೆ. ಸದ್ಯ ಇವರು ಅಂಟಿಗುವಾದಲ್ಲಿ ನೆಲೆಸಿದ್ದಾರೆ.
ಮುಂಬೈ ವಿಶೇಷ ನ್ಯಾಯಾಲಯ ಕಳೆದ ಕೆಲವು ದಿನಗಳ ಹಿಂದೆ ಜಾರಿ ನಿರ್ದೇಶನಾಲಯಕ್ಕೆ ನೀರವ್ ಮೋದಿಯವರ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶ ನೀಡಿತ್ತು. ಈ ತೀರ್ಪು ನೀಡಿದ ಕೆಲವೇ ದಿನಗಳಲ್ಲಿ ಈ ಬೆಳವಣೆಗಳು ನಡೆದಿವೆ.
“ಈ ಅಮೂಲ್ಯ ವಸ್ತುಗಳನ್ನು ಭಾರತಕ್ಕೆ ಮರಳಿ ತರಲು ಅಧಿಕಾರಿಗಳು ಹಾಂಕಾಂಗ್‌ನ ವಿವಿಧ ಅಧಿಕಾರಿಗಳೊಂದಿಗೆ ನಿರಂತರವಾಗಿ ಚರ್ಚೆಯಲ್ಲಿ ತೊಡಗಿದ್ದರು. ವಿವಿಧ ವಿಧಾನಗಳನ್ನು ಅಂತಿಮಗೊಳಿಸಿ ಮತ್ತು ಎಲ್ಲಾ ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಈ ಸರಕುಗಳನ್ನು ಈಗ ಭಾರತಕ್ಕೆ ತರಲಾಗಿದೆ,” ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಿಂದ ತಿಳಿದುಬಂದಿದೆ.
Comments are closed.