ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಆಮ್ ಆದ್ಮಿ ಪಕ್ಷದ ಶಾಸಕ ಹಾಗೂ ವಕ್ತಾರ ರಾಘವ್ ಚಾಧಾ ಅಧಿಕೃತ ಟ್ವಿಟರ್‌ನಲ್ಲಿ ಈ ವಿಷಯ ತಿಳಿಸಿದ್ದಾರೆ.
“ಸಿಎಂ ಅರವಿಂದ್ ಕೇಜ್ರಿವಾಲ್ ಕೋವಿಡ್-10 ಟೆಸ್ಟ್ ನೆಗೆಟಿವ್. ಧನ್ಯವಾದಗಳು ದೇವರೇ,” ಎಂದು ರಾಘವ್ ಚಾದಾ ಟ್ವೀಟ್ ಮಾಡಿದ್ದಾರೆ.
ಕೊರೊನಾ ರೋಗಿಗಳಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳು ಗೋಚರಿಸಿದ ಪರಿಣಾಮ ಅರವಿಂದ್ ಕೇಜ್ರಿವಾಲ್ ಸ್ವಯಂ ಗೃಹಬಂಧನಕ್ಕೆ ಗುರಿಯಾಗಿದ್ದರು. ಅದರಂತೆ ಇಂದು ಕೇಜ್ರಿವಾಲ್ ಅವರನ್ನು ಕೊರೊನಾ ಪರೀಕ್ಷೆಗೆ ಗುರಿಪಡಿಸಲಾಗಿತ್ತು.
ಈ ಕುರಿತು ಮಾಹಿತಿ ನೀಡಿದ್ದ ವೈದ್ಯರು, ಕೊರೊನಾ ಲಕ್ಷಣ ಕಂಡುಬಂದ ಪರಿಣಾಮ ಕೇಜ್ರಿವಾಲ್ ಅವರನ್ನು ಪರೀಕ್ಷೆಗೆ ಗುರಿಪಡಿಸಲಾಗಿದ್ದು, ಶೀಘ್ರದಲ್ಲೇ ವರದಿ ಬರಲಿದೆ ಎಂದು ಹೇಳಿದ್ದರು. ಇದೀಗ ವರದಿ ಬಂದಿದ್ದು, ದಿಲ್ಲಿ ಮುಖ್ಯಮಂತ್ರಿಗಳ ಕೋವಿಡ್ ವರದಿ ನೆಗೆಟಿವ್ ಬಂದಿದೆ.
ನಿನ್ನೆ(ಜೂನ್ 8) ಕೇಜ್ರಿವಾಲ್ ಅವರಿಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದು, ಗಂಟಲಿನಲ್ಲಿ ಕೆರೆತವೂ ಉಂಟಾಗಿತ್ತು. ಮಧುಮೇಹ ರೋಗಿಯಾಗಿರುವ ಅವರನ್ನು ತಕ್ಷಣದಲ್ಲೇ ಕ್ವಾರಂಟೈನ್‌ಗೆ ತೆರಳಿ, ಪರೀಕ್ಷೆ ನಡೆಸಿಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಆರೋಗ್ಯ ಸಚಿವಾಲಯದ ಪ್ರಕಾರ ದಿಲ್ಲಿಯಲ್ಲಿ 29,943 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, 17,712 ಪ್ರಕರಣಗಳು ಸಕ್ರಿಯವಾಗಿವೆ. ಇದರಲ್ಲಿ 11,357 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 874 ಮಂದಿ ಮಾರಣಾಂತಿಕ ಸೋಂಕಿಗೆ ಬಲಿಯಾಗಿದ್ದಾರೆ.
Comments are closed.