ರಾಷ್ಟ್ರೀಯ

ಟೀಕೆ: ಬಾಲಿವುಡ್ ನಟ ಸೋನು ಸೂದ್ ಮಹಾರಾಷ್ಟ್ರ CM ಉದ್ಧವ್ ಠಾಕ್ರೆ ನಿವಾಸಕ್ಕೆ ಭೇಟಿ ನೀಡಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ

Pinterest LinkedIn Tumblr

ಮುಂಬೈ:ಕೊರೋನಾ ವೈರಸ್ ಸಮಯದಲ್ಲಿ ವಲಸೆ ಕಾರ್ಮಿಕರು ಮತ್ತು ಬಡವರಿಗೆ ಸಹಾಯ ಮಾಡಿ ಸುದ್ದಿಯಾಗಿದ್ದ ಬಾಲಿವುಡ್ ನಟ ಸೋನು ಸೂದ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸಕ್ಕೆ ಭೇಟಿ ನೀಡಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.ಇದಕ್ಕೆ ಕಾರಣ ನಿನ್ನೆ ಮಹಾರಾಷ್ಟ್ರ ಮೈತ್ರಿಕೂಟದ ಪ್ರಮುಖ ಪಕ್ಷವಾಗಿರುವ ಶಿವಸೇನೆಯಲ್ಲಿ ನಡೆದ ಘಟನೆ ಎನ್ನಬಹುದು.

ಸೋನು ಸೂದ್ ಅವರು ಭಾರತೀಯ ಜನತಾ ಪಕ್ಷದ ಸೂಚನೆ ಮೇರೆಗೆ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ. ಕೊರೋನಾ ವೈರಸ್ ನ್ನು ನಿಯಂತ್ರಿಸುವಲ್ಲಿ, ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ ಎಂದು ತೋರಿಸಲು ಬಿಜೆಪಿ ಹಣ ಕೊಟ್ಟು ನಡೆಸುತ್ತಿರುವ ಕುತಂತ್ರವಿದು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಆರೋಪಿಸಿದ ಸಂದರ್ಭದಲ್ಲಿ ಸೋನ್ ಸೂದ್ ಭೇಟಿ ಸುದ್ದಿಯಾಗಿದೆ.

ಸಚಿವ ಅಸ್ಲಮ್ ಶೇಖ್ ಮತ್ತು ನನ್ನ ಜೊತೆ ಸೋನು ಸೂದ್ ಅವರು ಸಿಎಂ ಉದ್ಧವ್ ಠಾಕ್ರೆಯವರನ್ನು ಭೇಟಿ ಮಾಡಿದ್ದಾರೆ. ಈ ಸಮಯದಲ್ಲಿ ಒಟ್ಟು ಸೇರಿ ಕೆಲಸ ಮಾಡಿದರೆ ಅನೇಕ ಮಂದಿಗೆ ಸಹಾಯ ಮಾಡಬಹುದು.ಮಹಾರಾಷ್ಟ್ರ ಜನತೆಗೆ ಸಹಾಯ ಮಾಡಲು ಇಂತಹ ಉತ್ತಮ ಹೃದಯವುಳ್ಳ ವ್ಯಕ್ತಿಯನ್ನು ಭೇಟಿ ಮಾಡಿರುವುದು ಒಳ್ಳೆಯದಾಯಿತು ಎಂದು ಆದಿತ್ಯ ಠಾಕ್ರೆ ಸೋನು ಸೂದ್ ಭೇಟಿ ನಂತರ ಟ್ವೀಟ್ ಮಾಡಿದ್ದಾರೆ.

ಉದ್ಧವ್ ಠಾಕ್ರೆಯವರನ್ನು ಭೇಟಿ ಮಾಡಿದ ನಂತರ ಸಂಜಯ್ ರಾವತ್ ಹೇಳಿಕೆಯನ್ನು ತಳ್ಳಿಹಾಕಿದ ಸೋನು ಸೂದ್, ದೇಶದ ಪ್ರತಿ ಮೂಲೆ ಮೂಲೆಗಳಲ್ಲಿ ತಮ್ಮ ಕೆಲಸಕ್ಕೆ ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇದು ಒಂದು ಪಕ್ಷ ಅಥವಾ ಒಬ್ಬರಿಗೆ ಮಾತ್ರ ಸಂಬಂಧಪಟ್ಟ ವಿಷಯವಲ್ಲ, ಬಿಜೆಪಿಯವರು ಕೂಡ ನನ್ನ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಮಸ್ಯೆಯಲ್ಲಿರುವವರಿಗೆ ನಾವು ಸಹಾಯ ಮಾಡಬೇಕು, ಇಲ್ಲಿ ವ್ಯಕ್ತಿ, ಪಕ್ಷ ಮುಖ್ಯವಾಗುವುದಿಲ್ಲ ಎಂದರು.

ಸಂಜಯ್ ರಾವತ್ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ, ಚೆನ್ನಾಗಿ ದುಡ್ಡು ಕೊಡ್ಡ ಪಕ್ಷವನ್ನು ಸೋನು ಸೂದ್ ಪ್ರಚಾರ ಮಾಡುತ್ತಾರೆ. ಸೋನು ಸೂದ್ ಅವರ ವೃತ್ತಿ ನಟನೆ, ಯಾರಾದರೂ ಬರೆದುಕೊಟ್ಟ ಸಂಭಾಷಣೆಯನ್ನು ಹೇಳಿ ಅದರಿಂದ ಹಣ ಸಂಪಾದನೆ ಮಾಡುವುದು ಅವರ ಕೆಲಸ. ಸೋನು ಸೂದ್ ಅವರಂಥ ಅನೇಕ ವ್ಯಕ್ತಿಗಳು ನಮ್ಮ ಸುತ್ತಮುತ್ತ ಇದ್ದು ಚೆನ್ನಾಗಿ ಹಣ ಕೊಟ್ಟ ಪಕ್ಷದ ಪರ ಪ್ರಚಾರ ಮಾಡುತ್ತಾರೆ ಎಂದು ಟೀಕಿಸಿದ್ದರು.

ನಿನ್ನೆ ಸೋನು ಸೂದ್ ಅವರು ಮುಖ್ಯಮಂತ್ರಿ ನಿವಾಸಕ್ಕೆ ಹೋಗುತ್ತಿದ್ದಂತೆ ಸಂಜಯ್ ರಾವತ್ ತಮ್ಮ ಟ್ವೀಟ್ ನ್ನು ಡಿಲೀಟ್ ಮಾಡಿದ್ದಾರೆ. ಕೊನೆಗೂ ಸೋನು ಸೂದ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ನಿವಾಸದ ವಿಳಾಸ ಪತ್ತೆಹಚ್ಚಿ ಅವರ ಮನೆಗೆ ಹೋಗಿದ್ದಾರೆ. ಜೈ ಮಹಾರಾಷ್ಟ್ರ ಎಂದು ನಂತರ ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.

Comments are closed.