ರಾಷ್ಟ್ರೀಯ

ಜೂನ್ 11 ರಿಂದ ನಿತ್ಯ 6 ಸಾವಿರ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನ

Pinterest LinkedIn Tumblr


ತಿರುಪತಿ: ಕೊರೋನಾ ವೈರಸ್ ಲಾಕ್’ಡೌನ್ ಪರಿಣಾಮ ಕಳೆದ ಮಾರ್ಚ್ 20ರಿಂದ ಭಕ್ತರ ಪಾಲಿಗೆ ಬಂದ್ ಆಗಿದ್ದ ತಿರುಪತಿ ತಿಮ್ಮಪ್ಪನ ದರ್ಶನ ಮತ್ತೆ ಜೂನ್ 11ರಿಂದ ಆರಂಭವಾಗುತ್ತಿದ್ದು, ನಿತ್ಯ 6 ಸಾವಿರ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿರುವುದರಿಂದ ದರ್ಶನಕ್ಕೆ ಸೀಮಿತ ಸಂಖ್ಯೆಯ ಭಕ್ತರಿಗೆ ಅವಕಾಶ ನೀಡಲಾಗಿದೆ.

ಈ ಸಂಬಂಧ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಅವರು, ಜೂನ್ 11ರಿಂದ ಸಾಮಾನ್ಯ ದರ್ಶನ ಆರಂಭವಾಗಲಿದೆ. ಜೂನ್ 8ರಿಂದ ಮೂರು ದಿನ ಪ್ರಾಯೋಗಿಕವಾಗಿ ಕೇವಲ ಸಿಬ್ಬಂದಿಗೆ ವೆಂಕಟೇಶನ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದರು.

ಜೂನ್8 ಮತ್ತು 9 ರಂದು ಕೇವಲ ದೇಗುಲ ಸಿಬ್ಬಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು, ಸರದಿ ಸಾಲಿನಲ್ಲಿ ಆಗಮಿಸಲು ಅವಕಾಶ ನೀಡಿ ದರ್ಶನ ಮಾಡಿಸಲಾಗುತ್ತದೆ. ಈ ವೇಳೆ ಮಾಸ್ಕ್ ಮತ್ತು ಸಾನಿಟೈಸರ್ ಅನ್ನು ಬಳಸಲಾಗುತ್ತದೆ ಎಂದರು. ಅಲ್ಲದೆ ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡು ಒಂದು ದಿನಕ್ಕೆ ಎಷ್ಟು ಜನರಿಗೆ ದರ್ಶನಕ್ಕೆ ಅವಕಾಶ ನೀಡಬಹುದು ಎಂಬುದನ್ನು ಸಹ ಪರಿಶೀಲಿಸಲಾಗುವುದು ಎಂದರು.

ಜೂನ್ 10ರಂದು ಸ್ಥಳೀಯ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಜೂನ್ 11ರಿಂದ ಎಲ್ಲರಿಗೂ ಅವಕಾಶ ನೀಡಲಾಗುವುದು. ಈ ವೇಳೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ದರ್ಶನಕ್ಕೆ ಅವಕಾಶ ಇಲ್ಲ ಎಂದು ಸುಬ್ಬಾ ರೆಡ್ಡಿ ಅವರು ತಿಳಿಸಿದರು.

ದರ್ಶನಕ್ಕಾಗಿ ನಿತ್ಯ ಆನ್ ಲೈನ್ ಮೂಲಕ 3 ಸಾವಿರ ಟಿಕೆಟ್ ಗಳನ್ನು ಹಾಗೂ ಉಳಿದ 3 ಸಾವಿರ ಟಿಕೆಟ್ ಗಳನ್ನು ತಿರುಪತಿ ಮತ್ತು ಅಲಿಪಿರಿ ಕೌಂಟರ್ ಗಳಲ್ಲಿ ನೀಡಲಾಗುವುದು ಎಂದರು.

Comments are closed.