ರಾಷ್ಟ್ರೀಯ

ದೇಶದಲ್ಲಿ ಕೊರೋನಾ ವೈರಸ್ ಆರ್ಭಟ; ಒಂದೇ ದಿನ 8,909 ಮಂದಿಯಲ್ಲಿ ಸೋಂಕು ಪತ್ತೆ: ಸೋಂಕಿತರ ಸಂಖ್ಯೆ 2 ಲಕ್ಷಕ್ಕೆ ಏರಿಕೆ

Pinterest LinkedIn Tumblr

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಒಂದೇ ದಿನ 8,909 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.

ಕೇವಲ 15 ದಿನಗಳಲ್ಲಿ ವೈರಸ್ ಪೀಡಿತರು 1 ಲಕ್ಷದಷ್ಟು ಹೆಚ್ಚಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಒಟ್ಟು 8,909 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 207,615ಕ್ಕೆ ಏರಿಕೆಯಾಗಿದೆ. ಇನ್ನು ಒಂದೇ ದಿನ 217 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 5,815ಕ್ಕೆ ತಲುಪಿದೆ.

ಈ ನಡುವೆ 207,615 ಮಂದಿ ಸೋಂಕಿತರ ಪೈಕಿ 100,303 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಪ್ರಸ್ತುತ ದೇಶದಲ್ಲಿ 101,497 ಮಂದಿ ಇನ್ನೂ ಸೋಂಕಿನಿಂದ ಬಳಲುತ್ತಿದ್ದಾರೆಂದು ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಒಂದೇ ದಿನ 8000ಕ್ಕೂ ಅಧಿಕ ಸೋಂಕು ಕಂಡುಬರುತ್ತಿರುವುದು ಇದು ಎರಡನೇ ಬಾರಿ. ಮೇ.30 ರಂದು ಶನಿವಾರ ಒಂದೇ 8,400 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು 316 ಮಂದಿ ಸಾವಿಗೀಡಾಗಿದ್ದರು. ಇದೇ ವೇಳೆ ಮಹಾರಾಷ್ಟ್ರದಲ್ಲಿ ಹೊಸದಾಗಿ 2,287 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 72,300ಕ್ಕೆ ಏರಿಕೆಯಾಗಿದೆ.

Comments are closed.