ರಾಷ್ಟ್ರೀಯ

ಕ್ವಾರಂಟೈನ್ ಕೇಂದ್ರಗಳಲ್ಲಿ ಉಚಿತ ಕಾಂಡೋಮ್, ಗರ್ಭನಿರೋಧಕ, ಪ್ರೆಗ್ರನ್ಸಿ ಕಿಟ್‍ಗಳ ವಿತರಣೆ

Pinterest LinkedIn Tumblr


ಪಾಟ್ನಾ: 14 ದಿನಗಳ ಕ್ವಾರಂಟೈನ್ ಸಮಯವನ್ನು ಪೂರ್ಣಗೊಳಿಸಿ ಮನೆಗಳಿಗೆ ಹಿಂದಿರುಗುತ್ತಿದ್ದ ಪ್ರವಾಸಿ ಕಾರ್ಮಿಕರಿಗೆ ಬಿಹಾರ ಸರ್ಕಾರ ಕಾಂಡೋಮ್, ಗರ್ಭನಿರೋಧಕ, ಪ್ರೆಗ್ರನ್ಸಿ ಕಿಟ್‍ಗಳನ್ನು ಉಚಿತವಾಗಿ ವಿತರಣೆ ಮಾಡಿದೆ.

ಕುಟುಂಬ ನಿಯಂತ್ರಣ ಕಾರ್ಯಕ್ರಮದ ಭಾಗವಾಗಿ ಬಿಹಾರ ಸರ್ಕಾರ ಈ ಕಾರ್ಯವನ್ನು ಮಾಡುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಬಿಹಾರದಲ್ಲಿ ಕುಟುಂಬ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರ ಹೊಸ ಯೋಜನೆ ಜಾರಿ ಮಾಡಿದೆ. ಅಲ್ಲದೇ ಕೋವಿಡ್-19ಗೂ ಸರ್ಕಾರದ ಹೊಸ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

ಲಾಕ್‍ಡೌನ್ ಕಾರಣದಿಂದ ವಿವಿಧ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರು ಲಾಕ್‍ಡೌನ್ ನಿಯಮಗಳಲ್ಲಿ ಸಡಿಲಿಕೆ ಲಭಿಸಿದ ಕಾರಣ ತಮ್ಮ ಸ್ವ-ಸ್ಥಳಗಳಿಗೆ ವಾಪಸ್ ಆಗುತ್ತಿದ್ದಾರೆ. ಈ ರೀತಿ ವಾಪಸ್ ಆಗುತ್ತಿರುವ ಕಾರ್ಮಿಕರಿಗೆ 14 ದಿನಗಳ ಅವಧಿಯ ಹೋಂ ಕ್ವಾರಂಟೈನ್‍ಗೆ ಸೂಚನೆ ನೀಡಿ ಸರ್ಕಾರ ಮನೆಗಳಿಗೆ ಕಳುಹಿಸುತ್ತಿದೆ. ಈ ವೇಳೆ ಅಧಿಕಾರಿಗಳು ಕಾರ್ಮಿಕರಿಗೆ ಕಾಂಡೋಮ್ ನೀಡಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಅರೋಗ್ಯ ಅಧಿಕಾರಿಗಳಾಗಿ ಜನಸಂಖ್ಯೆ ನಿಯಂತ್ರಣ ನಮ್ಮ ಕರ್ತವ್ಯ ಎಂದು ಹಿರಿಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಕೇವಲ ಕ್ವಾರಂಟೈನ್ ಕೇಂದ್ರಗಳು ಮಾತ್ರವಲ್ಲದೇ ಗೋಪಾಲ್‍ಗಂಜ್, ಸಮಸ್ತಿಪುರ, ಚಂಪಾರನ್, ಸರನ್ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತರ ಮೂಲಕ ಮನೆ ಮನೆಗೆ ಕಾಂಡೋಮ್ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಲಾಕ್‍ಡೌನ್ ಕಾರಣದಿಂದ ಬಿಹಾರ ರಾಜ್ಯವೊಂದರಲ್ಲೇ ಸುಮಾರು 8 ಲಕ್ಷ ಪ್ರವಾಸಿ ಕಾರ್ಮಿಕರು ಸ್ವ-ಸ್ಥಳಗಳಿಗೆ ವಾಪಸ್ ಆಗಿದ್ದಾರೆ. ಸುಮಾರು 5.26 ಲಕ್ಷ ಮಂದಿಗೆ ಸಾಂಸ್ಥಿಕ ಕಾರಂಟೈನ್ ಮಾಡಲಾಗಿದೆ. ಜೂನ್ 15 ಬಳಿಕ ಕಾರಂಟೈನ್ ಕೇಂದ್ರಗಳನ್ನು ಮುಚ್ಚಿ ಆ ಬಳಿಕ ಎಲ್ಲರಿಗೂ ಹೋಂ ಕ್ವಾರಂಟೈನ್ ಮಾಡಲು ಬಿಹಾರ ಸರ್ಕಾರ ನಿರ್ಧರಿಸಿದೆ.

ಕೊರೊನಾ ಸೋಂಕಿನ ಕಾರಣದಿಂದ ಬಿಹಾರದಲ್ಲಿ ಇದುವರೆಗೂ 23 ಮಂದಿ ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆ 3,945ಕ್ಕೇರಿದೆ.

Comments are closed.