ರಾಷ್ಟ್ರೀಯ

ಅಸ್ಸಾಂನಲ್ಲಿ ಭಾರೀ ಭೂ ಕುಸಿತ- 20 ಮಂದಿ ದುರ್ಮರಣ

Pinterest LinkedIn Tumblr


ದಿಸ್ಪುರ್: ದಕ್ಷಿಣ ಅಸ್ಸಾಂನ ಬರಾಕ್ ಕಣಿವೆ ಪ್ರದೇಶದ ಮೂರು ಜಿಲ್ಲೆಯಲ್ಲಿ ಭಾರೀ ಭೂ ಕುಸಿತ ಸಂಭವಿಸಿದ ಪರಿಣಾಮ ಸುಮಾರು 20 ಮಂದಿ ಮೃತಪಟ್ಟಿದ್ದಾರೆ.

ಮೃತಪಟ್ಟವರಲ್ಲಿ ಕ್ಯಾಚರ್ ಜಿಲ್ಲೆಯಲ್ಲಿ ಏಳು, ಹೈಲಕಂಡಿ ಜಿಲ್ಲೆಯಲ್ಲಿ ಏಳು ಮತ್ತು ಕರಿಮ್‍ಗಂಜ್ ಜಿಲ್ಲೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಮೂರು ಕುಟುಂಬಗಳಲ್ಲಿ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ 11 ಮಕ್ಕಳು ಮತ್ತು ಮೂವರು ಮಹಿಳೆಯರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ಎರಡು ದಿನಗಳಿಂದ ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಅಲ್ಲದೇ ಈ ಭೂ ಕುಸಿತದಿಂದ ಹಲವಾರು ಮಂದಿ ಗಾಯಗೊಂಡಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ.

ಭಾರತದ ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ಈಗಾಗಲೇ ಪ್ರವಾಹದಿಂದ 3.72 ಲಕ್ಷ ತೊಂದರೆಗೀಡಾಗಿದ್ದಾರೆ. ಗೋಲ್ಪಾರ ಜಿಲ್ಲೆಯಲ್ಲಿ ಹೆಚ್ಚು ಹಾನಿಯಾಗಿದ್ದು, ಪ್ರವಾಹದಿಂದ ನೂರಾರು ಗ್ರಾಮಗಳು ಜಲಾವೃತವಾಗಿದೆ. ಸುಮಾರು 27,000 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳಿಗೆ ಹಾನಿಯಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಭೂಕುಸಿತದ ನಂತರ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ, ಶೀಘ್ರವೇ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಆದೇಶ ಹೊರಡಿಸಿದ್ದಾರೆ.

Comments are closed.