ರಾಷ್ಟ್ರೀಯ

ಒಂದು ವಾರ ದೆಹಲಿಯ ಎಲ್ಲಾ ಗಡಿಗಳೂ ಬಂದ್: ಕೇಜ್ರಿವಾಲ್

Pinterest LinkedIn Tumblr


ನವದೆಹಲಿ: ಕೊರೋನಾ ವೈರಸ್ ಹತ್ತಿಕ್ಕುವ ನಿಟ್ಟಿನಲ್ಲಿ ಒಂದು ವಾರ ದೆಹಲಿಯ ಎಲ್ಲಾ ಗಡಿಗಳನ್ನೂ ಬಂದ್ ಮಾಡಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಆರ್ಥಿಕತೆ ದೃಷ್ಟಿಯಿಂದ ಹಂತ ಹಂತವಾಗಿ ಲಾಕ್’ಡೌನ್ ಸಡಿಲಿಕೆ ಮಾಡಬೇಕೆಂದು ಕೇಂದ್ರ ಸರ್ಕಾರ ಈ ಹಿಂದೆ ಹೇಳಿತ್ತು. ಆದಾಗ್ಯೂ ಕಂಟೈನ್ಮೆಂಟ್ ಝೋನ್ ನಲ್ಲಿ ಜೂ.30ರವರೆಗೆ ಲಾಕ್’ಡೌನ್ ಮುಂದುವರೆಯಲಿದೆ. ಒಂದು ವಾರಗಳ ಕಾಲ ದೆಹಲಿಯ ಎಲ್ಲಾ ಗಡಿಗಳನ್ನು ಮುಚ್ಚಲಿದ್ದು, ಅಗತ್ಯ ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಅಂಗಡಿ ತೆರೆಯಲು ಸಮ-ಬೆಸ್ ನಿಯಮ ಪಾಲನೆ ಮಾಡುತ್ತಿದ್ದೆವು. ಆದರೆ, ಕೇಂದ್ರ ಸರ್ಕಾರ ಈ ರೀತಿಯ ಯಾವುದೇ ನಿಯಮ ಪಾಲಿಸಲು ಸೂಚನೆ ನೀಡದ ಕಾರಣ ಎಲ್ಲಾ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಉತ್ತರಪ್ರದೇಶ ಮತ್ತು ಹರಿಯಾಣದೊಂದಿಗೆ ಗಡಿ ತೆರೆಯುವ ಕುರಿತು ದೆಹಲಿ ಜನತೆ ತಮ್ಮ ಸಲಹೆಗಳನ್ನು ಶುಕ್ರವಾರ ಸಂಜೆ 5 ರೊಳಗೆ ವಾಟ್ಸಾಪ್ ಸಂಖ್ಯೆ 8800007722, ಹಾಗೂ delhicm.suggestions@gmail.com ಗೆ ಕಳುಹಿಸಬಹುದಾಗಿದೆ. ದೂರವಾಣಿ ಸಂಖ್ಯೆ 1031 ಕ್ಕೆ ಕರೆ ಮಾಡಿ ಕೂಡ ಸಲಹೆ ನೀಡಬಹುದಾಗಿದೆ ಎಂದಿದ್ದಾರೆ.

ನಿನ್ನೆಯಷ್ಟೇ ಉತ್ತರಪ್ರದೇಶದ ಗೌತಮ ಬುದ್ಧ ನಗರ ಜಿಲ್ಲಾಡಳಿತ ಮಂಡಳಿಯು ನೊಯ್ಡಾ-ದೆಹಲಿಯ ಗಡಿಯನ್ನು ಬಂದ್ ಮಾಡಿತ್ತು. ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ಶೇ.42ರಷ್ಟು ಸೋಂಕಿತ ಪ್ರಕರಣಗಳು ದೆಹಲಿ ಮೂಲದಿಂದಲೇ ಬಂದಿದ್ದು, ಹೀಗಾಗಿ ಗಡಿ ಬಂದ್ ಮಾಡುವುದಾಗಿ ತಿಳಿಸಿತ್ತು.

ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಕೇಜ್ರಿವಾಲ್ ಅವರೂ ಕೂಡ ದೆಹಲಿಯ ಎಲ್ಲಾ ಗಡಿಗಳನ್ನು ಬಂದ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

ಈ ನಡುವೆ ಕೊರೋನಾ ಸಿದ್ಧತೆಗಳ ಕುರಿತಂತೆಯೂ ಮಾಹಿತಿ ನೀಡಿರುವ ಅವರು, ನಗರದಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಲ್ಲಿ ಯಾವುದೇ ರೀತಿಯ ಹಾಸಿಗೆಗಳ ಕೊರೆತೆಗಳಿಲ್ಲ. ಕೇಂದ್ರ ಸರ್ಕಾರ ಸಡಿಲಗೊಳಿಸಲು ನೀಡಿರುವ ಎಲ್ಲಾ ಆದೇಶಗಳನ್ನೂ ಪಾಲನೆ ಮಾಡಲಾಗುತ್ತಿದೆ. ಬಾರ್ಬರ್ ಶಾಪ್ ಹಾಗೂ ಸಲೂನ್ ಗಳು ಎಂದಿನಂತೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುತ್ತಿದೆ. ಆದರೆ, ಸ್ಪಾ ಗಳು ಮಾತ್ರ ಬಂದ್ ಆಗಿರಲಿವೆ. ಇದನ್ನು ಹೊರತುಪಡಿಸಿ ಉಳಿದೆಲ್ಲಾ ಆಂಗಡಿಗಳು ತೆರೆಯಲು ಅವಕಾಶ ನೀಡಲಾಗುತ್ತಿದೆ. ಇವುಗಳ ಮೇಲೆ ಯಾವುದೇ ರೀತಿಯ ನಿರ್ಬಂಧಗಳಿರುವುದಿಲ್ಲ. ನಾಲ್ಕು ಚಕ್ರ ಹಾಗೂ ದ್ವಿಚಕ್ರ ವಾಹನಗಳಲ್ಲಿ ತೆರಳುವ ಜನರ ಮೇಲೂ ಯಾವುದೇ ರೀತಿಯ ನಿರ್ಬಂಧಗಳಿರುವುದಿಲ್ಲ ಎಂದಿದ್ದಾರೆ.

Comments are closed.