ರಾಷ್ಟ್ರೀಯ

ಅರಬ್ಬೀ ಸಮುದ್ರದಲ್ಲಿ ಚಂಡಮಾರುತ; ಮಹಾರಾಷ್ಟ್ರ, ಗುಜರಾತ್ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ

Pinterest LinkedIn Tumblr

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳದಲ್ಲಿ 100 ಮಂದಿಯನ್ನು ಬಲಿ ಪಡೆದುಕೊಂಡ ಬೆನ್ನಲ್ಲೇ ಇದೀಗ ಅರಬ್ಬೀ ಸಮುದ್ರದಲ್ಲಿ ಚಂಡಮಾರುತವೊಂದು ಸೃಷ್ಟಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಗುಜರಾತ್ ರಾಜ್ಯಗಳ ಕರಾವಳಿಯಲ್ಲಿ ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿದ್ದು, ಅದು ಮುಂದಿನ 36 ತಾಸುಗಳಲ್ಲಿ ಚಂಡಮಾರುತ ಸ್ವರೂಪ ಪಡೆಯುವ ಎಲ್ಲಾ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಜೂನ್.4ರಂದು ಮಹಾರಾಷ್ಟ್ರ ಹಾಗೂ ಗುಜರಾತ್ ಕರಾವಳಿಗೆ ಈ ಚಂಡಮಾರುತ ಅಪ್ಪಳಿಸುವ ಸಂಭವವಿದೆ. ಅದರ ಪ್ರಬಾವದಿಂದ ಕರಾವಳಿ ಕರ್ನಾಟಕ, ಕೇರಳ ಸೇರಿ ಹಲವೆಡೆ ಧಾರಾಕಾರ ಮಳೆಯಾಗುವ ಸಾಧ್ಯತೆಗಳಿವೆ. ವಾಯುಭಾರ ಕುಸಿತ ಒಂದು ಪ್ರಬಲ ಚಂಡಮಾರುತವಾಗಿ ಬದಲಾಗುವ ಪರಿಸ್ಥಿತಿ ಅನುಕೂಲಕರವಾಗಿದೆ.

ಒಂದು ವೇಳೆ ಚಂಡಮಾರುತ ಸೃಷ್ಟಿಯಾದರೆ ಅದಕ್ಕೆ ನಿಸರ್ಗ ಎಂಬ ಹೆಸರನ್ನು ಪಡೆದುಕೊಳ್ಳಲಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

Comments are closed.