ರಾಷ್ಟ್ರೀಯ

ದೇಶದಲ್ಲಿ ಕೊರೋನಾ ರಣಕೇಕೆ; ಒಂದೇ ದಿನ ಬರೋಬ್ಬರಿ 8,380 ಮಂದಿಯಲ್ಲಿ ವೈರಸ್ ದೃಢ: ಒಟ್ಟಾರೆ ಸೋಂಕಿತರ ಸಂಖ್ಯೆ 1.90 ಲಕ್ಷಕ್ಕೇರಿಕೆ

Pinterest LinkedIn Tumblr

ನವದೆಹಲಿ: ದೇಶದಲ್ಲಿ ಕೊರೋನಾ ರಣಕೇಕೆ ಹೆಚ್ಚಾಗುತ್ತಲೇ ಇದ್ದು, ಒಂದೇ ದಿನ ಬರೋಬ್ಬರಿ 8,380 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1.90 ಲಕ್ಷಕ್ಕೇರಿದೆ, ಅಲ್ಲದೆ, ಸಾವಿನ ಸಂಖ್ಯೆ 5,394ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ 8,380 ಮಂದಿಯಲ್ಲಿ ಸೋಂಕು ಪತ್ತೆಯಾಗುವುದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 190,535ಕ್ಕೆ ಏರಿಕೆಯಾಗಿದ್ದು, ಈ ಮೂಲಕ ವಿಶ್ವದ ಟಾಪ್ 10 ಕೊರೋನಾಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು 2 ಸ್ಥಾನ ಜಿಗಿದು 7ನೇ ಸ್ಥಾನಕ್ಕೇರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೊರೋನಾ ವರ್ಲ್ಡೋಮೀಟರ್ಸ್ ವೆಬ್’ಸೈಟ್ ತಿಳಿಸಿವೆ.

ಈ ನಡುವೆ ನಿನ್ನೆ ಒಂದೇ ದಿನ ಮಹಾಮಾರಿ ವೈರಸ್’ಗೆ 230 ಮಂದಿ ಬಲಿಯಾಗಿದ್ದಾರೆ. ಲಾಕ್’ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ಕಡಿಮೆಯಿದ್ದ ಸೋಂಕಿನ ಪ್ರಮಾಣ ಸಂಖ್ಯೆ ಇದೀಗ ಅಧಿಕಗೊಂಡಿದ್ದು, ಭಾರತ ಇದೇ ವೇಗದಲ್ಲಿ ಹೋಗಿದ್ದೇ ಆದರೆ, 2.33 ಲಕ್ಷ ಪ್ರಕರಣಗಳಿರುವ ಇಟಲಿಯನ್ನೂ 4 ದಿನದಲ್ಲಿ ಹಿಂದಿಕ್ಕಿ 6ನೇ ಸ್ಥಾನಕ್ಕೆ ಜಿಗಿಯುವ ಅಪಾಯವು ಕಂಡು ಬರುತ್ತಿದೆ ಎಂದು ಹೇಳಲಾಗುತ್ತಿದೆ.

ಈ ನಡುವೆ 1,90,535 ಮಂದಿ ಸೋಂಕಿತರ ಪೈಕಿ 91, 819 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಪ್ರಸ್ತುತ ದೇಶದಲ್ಲಿನ್ನೂ 93,322 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ.

Comments are closed.