ರಾಷ್ಟ್ರೀಯ

ದೇಶದಲ್ಲಿ 24 ಗಂಟೆಯಲ್ಲಿ 5,242 ಮಂದಿಯಲ್ಲಿ ವೈರಸ್ ದೃಢ: 157 ಮಂದಿ ಬಲಿ

Pinterest LinkedIn Tumblr


ನವದೆಹಲಿ: ಭಾರತದಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು, ಒಂದೇ ದಿನ ಬರೋಬ್ಬರಿ 5,242 ಮಂದಿಯಲ್ಲಿ ಮಹಾಮಾರಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 96,169ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.

24 ಗಂಟೆಗಳಲ್ಲಿ 157 ಮಂದಿ ಹೆಮ್ಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ ಕೂಡ 3,029 ಕ್ಕೆ ಏರಿಕೆಯಾಗಿದೆ. ಈ ನಡುವೆ 96,169 ಮಂದಿ ಸೋಂಕಿತರ ಪೈಕಿ 36,824 ಸೋಂಕಿನಿಂದ ಗುಣಮುಖರಾಗಿದ್ದು, ಪ್ರಸ್ತುತ ದೇಶದಲ್ಲಿನ್ನೂ 59,345 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

ಈ ನಡುವೆ ಮಹಾರಾಷ್ಟ್ರದಲ್ಲಿ ಹೆಮ್ಮಾರಿ ವೈರಸ್ ಬೆನ್ನು ಬಿಡದೆ ಕಾಡುತ್ತಿದೆ. ಮಹಾರಾಷ್ಟ್ರ ಒಂದೇ ರಾಜ್ಯದಲ್ಲಿ ಬರೋಬ್ಬರಿ 33,053 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ, 1,198 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಗುಜರಾತ್ ರಾಜ್ಯದಲ್ಲಿ 11,379, ತಮಿಳುನಾಡು 11,224, ದೆಹಲಿಯಲ್ಲಿ 10,054 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.

Comments are closed.