ರಾಷ್ಟ್ರೀಯ

ಅಜಾನ್‌ ವೇಳೆ ಲೌಡ್‌ಸ್ಪೀಕರ್‌ ಅಥವಾ ಶಬ್ಧ ಹೆಚ್ಚಿಸುವ ಯಾವುದೇ ಪರಿಕರ ಬಳಸುವಂತಿಲ್ಲ: ಅಲಹಾಬಾದ್‌ ಹೈ ಕೋರ್ಟ್‌ ತೀರ್ಪು

Pinterest LinkedIn Tumblr


ಲಖನೌ: ಅಜಾನ್‌ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಾಗಿರಬಹುದು. ಆದರೆ, ಲೌಡ್‌ಸ್ಪೀಕರ್‌ ಅಥವಾ ಧ್ವನಿವರ್ಧಕಗಳು ಮುಸ್ಲಿಂ ಧರ್ಮದ ಅವಿಭಾಜ್ಯ ಅಂಗವಲ್ಲ. ಹೀಗೆಂದು ಅಭಿಪ್ರಾಯಪಟ್ಟಿದ್ದು ಉತ್ತರ ಪ್ರದೇಶದ ಅಲಹಾಬಾದ್‌ ಹೈ ಕೋರ್ಟ್‌. ಅಜಾನ್‌ಗೆ ಧ್ವನಿವರ್ಧಕಗಳ ಬಳಕೆಗೆ ಸಂಬಂಧಪಟ್ಟ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಶಶಿಕಾಂತ್‌‌ ಗುಪ್ತಾ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.

ವಿಚಾರಣೆ ಬಳಿಕ ಅಜಾನ್‌ ವೇಳೆ ಲೌಡ್‌ಸ್ಪೀಕರ್‌ ಅಥವಾ ಶಬ್ಧ ಹೆಚ್ಚಿಸುವ ಯಾವುದೇ ಪರಿಕರ ಬಳಸುವಂತಿಲ್ಲ ಅಂತಲೂ ನ್ಯಾಯಮೂರ್ತಿ ಗುಪ್ತಾ ತೀರ್ಪು ನೀಡಿದ್ದಾರೆ. ಯಾವುದೇ ವ್ಯಕ್ತಿಗೆ ಆತನಿಗೆ ಇಷ್ಟವಾಗದ್ದನ್ನು ಅಥವಾ ಅನಗತ್ಯವಾಗಿದ್ದನ್ನು ಕೇಳಲು ಬಲವಂತಪಡಿಸಲಾಗದು. ಇದು ಸಂವಿಧಾನದ ವಿಧಿ 25ರ ಅಡಿಯಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಅಂತಲೂ ಶಶಿಕಾಂತ್‌ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ಅಜಾನ್‌ ಕೂಗುವುದಕ್ಕೆ ನಿರ್ಬಂಧ ಹೇರಲಾಗದು!
ಇನ್ನು ಇದೇ ವೇಳೆ ಕೋರ್ಟ್‌ ಲಾಕ್‌ಡೌನ್‌ ಹೆಸರಿನಲ್ಲಿ ಅಜಾನ್‌ ಕೂಗುವುದಕ್ಕೆ ನಿರ್ಬಂಧ ಹೇರಲಾಗದು. ಯಾವುದೇ ಶಬ್ಧ ಪರಿಕರಗಳನ್ನು ಬಳಸದೆ ಮಾನವ ಸಹಜ ಧ್ವನಿಯಲ್ಲಿಅಜಾನ್‌ ಪಠಿಸಬಹುದು ಅಥವಾ ಕೂಗಬಹುದು ಎಂದು ಕೋರ್ಟ್‌ ಹೇಳಿದೆ. ಜಿಲ್ಲಾಡಳಿತದ ಅನುಮತಿ ಇಲ್ಲದೆ ಅಜಾನ್‌ ಮತ್ತು ಯಾವುದೇ ವಿಷಯಕ್ಕೆ ಧ್ವನಿವರ್ಧಕ ಬಳಸುವುದು ಕಾನೂನಿನ ಉಲ್ಲಂಘನೆ ಎಂದು ಕೋರ್ಟ್‌ ತಿಳಿಸಿದೆ.

ಅರ್ಜಿಯಲ್ಲೇನಿತ್ತು?
ಉತ್ತರ ಪ್ರದೇಶದ ಘಾಜಿಪುರ ಕ್ಷೇತ್ರದ ಬಹುಜನ ಸಮಾಜ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ ಅವರು ಘಾಜಿಪುರ ಮಸೀದಿಯ ಅಜಾನ್ ವೇಳೆ ಧ್ವನಿವರ್ಧಕ ಬಳಕೆಗೆ ಜಿಲ್ಲಾಡಳಿತ ವಿಧಿಸಲಾಗಿರುವ ನಿರ್ಬಂಧ ತೆರವುಗೊಳಿಸಬೇಕೆಂದು ಕೋರಿ ಹೈ ಕೋರ್ಟ್‌ ಮೊರೆಹೋಗಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ನಿರ್ದಿಷ್ಟ ಮಾರ್ಗಸೂಚಿಯನ್ನು ಈ ಸಂಬಂಧ ಹೊರಡಿಸಿಲ್ಲ ಎಂದು ವಾದಿಸಿದ್ದರು. ಆದ್ರೆ ಇವರ ವಾದಕ್ಕೆ ಸೊಪ್ಪು ಹಾಕದ ಕೋರ್ಟ್‌ ಈ ಅರ್ಜಿಯನ್ನ ತಿರಸ್ಕರಿಸಿದೆ. ಅಲ್ಲದೇ ಅರ್ಜಿದಾರರು ಈ ಸಂಬಂಧ ಜಿಲ್ಲಾಡಳಿತವನ್ನ ಸಂಪರ್ಕಿಸಿ ಸಂಬಂಧಪಟ್ಟ ಅನುಮತಿ ಪಡೆಯಿರಿ ಎಂದು ಹೇಳಿದೆ.

Comments are closed.