ರಾಷ್ಟ್ರೀಯ

ಕೊರೋನಾ ವೈರಸ್ ಹರಡುವಿಕೆಯಲ್ಲಿ ಚೀನಾ ಹಿಂದಿಕ್ಕಿದ ಭಾರತ!

Pinterest LinkedIn Tumblr


ನವದೆಹಲಿ (ಮೇ 15): ಕೊರೋನಾ ಸೋಂಕು ತಡೆಯಲೇಬೇಕೆಂದು ದೇಶಕ್ಕೆ ದೇಶವನ್ನೇ ದಿಗ್ಬಂಧನಕ್ಕೊಳಪಡಿಸಲಾಗಿದೆ. ಆದರೂ ಸೋಂಕು ಹರಡುವಿಕೆ ಮಾತ್ರ ಕಡಿಮೆಯಾಗಿಲ್ಲ. ಇದಕ್ಕಿಂತಲೂ ಆತಂಕದ ಸಂಗತಿ ಎಂದರೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಇದಕ್ಕೂ ಮೀರಿದ ಅಪಾಯ ಎಂದರೆ ಈಗ ಪ್ರತಿನಿತ್ಯ ಮೂರ್ನಾಲ್ಕು ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಈಗ ಕೊರೋನಾ ಸೋಂಕು ಹರಡುವಿಕೆಯಲ್ಲಿ ಭಾರತವು ಚೀನಾವನ್ನೂ ಮೀರಿಸಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಮೇ 6 ರಿಂದಲೇ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಪ್ರತಿನಿತ್ಯ 3 ಸಾವಿರಕ್ಕಿಂತಲೂ ಹೆಚ್ಚಾಗಿದೆ. ಮೇ 6ರಂದು 3,561 ಜನರಿಗೆ, ಮೇ 7ರಂದು 3,390 ಮಂದಿಗೆ, ಮೇ 8ರಂದು 3,320 ಜನರಿಗೆ ಮತ್ತುಮೇ 9 ರಂದು 3,277 ಜನರಿಗೆ, ಮೇ 10ರಂದು 4,213 ಜನರಿಗೆ, ಮೇ 11ರಂದು 3,064 ಮಂದಿಗೆ, ಮೇ 12 ರಂದು 3,525 ಜನರಿಗೆ, ಮೇ 13ರಂದು 3,722 ಮಂದಿಗೆ ಹಾಗೂ ಮೇ 14ರಂದು 3,967 ಜನರಿಗೆ ಕೊರೋನಾ ಸೋಂಕು ಹರಡಿದೆ.

ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಲಾಕ್​ಡೌನ್​​ ನಿಯಮಗಳನ್ನು ಸಡಿಲಗೊಳಿಸಿದ ಮೇಲೆ ಕೊರೋನಾ ಸೋಂಕು ಹರಡುವಿಕೆ ದುಪ್ಪಟ್ಟಾಗಿದೆ. ಸದ್ಯದ ಮಾಹಿತಿ ಪ್ರಕಾರ ಮೇ 17ರ ಬಳಿಕ ಲಾಕ್​ಡೌನ್​ ಮುಂದುವರೆದರೂ ಬಹಳಷ್ಟು ವಿನಾಯಿತಿಗಳು ಇರಲಿವೆ. ಅಲ್ಲದೆ ಪ್ರಯಾಣಿಕರ ರೈಲು ಆರಂಭಿಸುತ್ತಿರುವುದು ಲಾಕ್​ಡೌನ್​ ಅನ್ನು ಕ್ರಮೇಣ ಕೊನೆಗಾಣಿಸಲಾಗುವುದು ಎಂಬುದರ ಸುಳಿವಾಗಿದೆ. ಲಾಕ್​ ಡೌನ್​ ನಡುವೆಯೇ ತೀವ್ರಗೊಂಡಿದ್ದ ಕೊರೋನಾ ಲಾಕ್ ​ಡೌನ್​ ತೆಗೆದ ಮೇಲೆ ತಹಬದಿಗೆ ಬರುತ್ತದೆ ಎಂಬ ಯಾವ ಆಶಾಭಾವವೂ ಇಲ್ಲ.

ಚೀನಾ ವಿಷಯಕ್ಕೆ ಬರುವುದಾದರೆ ಜಗತ್ತನ್ನೇ ಜಗ್ಗಾಡುತ್ತಿರುವ ಕೊರೋನಾ ವೈರಸ್ ಗೆ ಜನ್ಮ ನೀಡಿದ ಚೀನಾದಲ್ಲಿ ಈಗ ಕೊರೋನಾ ಸೋಂಕು ಹರಡುವಿಕೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ಇಂದಿನ ಅಂಕಿ ಅಂಶಗಳ ಪ್ರಕಾರ ಚೀನಾದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 82,933. ಚೀನಾದಲ್ಲಿ ಸದ್ಯ ದಿನಕ್ಕೆ ಒಂದೋ ಎರಡು ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ. ಕಳೆದ ಒಂದು ತಿಂಗಳಿನಿಂದ ಚೀನಾದಲ್ಲಿ ಕೊರೋನಾಗೆ ಒಬ್ಬನೇ ಒಬ್ಬ ವ್ಯಕ್ತಿಯೂ ಬಲಿಯಾಗಿಲ್ಲ.

ಚೀನಾದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 82,933‌. ಭಾರತದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 83,072. ಈ ಮೂಲಕ ಭಾರತ ಕೊರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದೆ. ಇದಲ್ಲದೆ ಜಾಗತಿಕವಾಗಿ ಕೊರೋನಾ ವೈರಸ್ ಪೀಡಿತರ ಸಂಖ್ಯೆಯಲ್ಲಿ ಈಗ ಭಾರತವು 11ನೇ ಸ್ಥಾನ ತಲುಪಿದೆ. 11ನೇ ಸ್ಥಾನದಲ್ಲಿದ್ದ ಚೀನಾ 12ನೇ ಸ್ಥಾನಕ್ಕೆ ಹೋಗಿದೆ.‌ ಅಮೇರಿಕಾ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಹೀಗೇ ಮುಂದುವರೆದರೆ ವಾರ ಕಳೆಯುವುದರೊಳಗೆ ಭಾರತ ಟಾಪ್ ಟೆನ್ ಒಳಗೂ ಬರಲಿದೆ.

Comments are closed.