ರಾಷ್ಟ್ರೀಯ

ರಾಷ್ಟ್ರ ರಾಜಧಾನಿ ದಿಲ್ಲಿಯಿಂದ ಬಂದು ಕ್ವಾರಂಟೈನ್​ಗೆ ಒಪ್ಪದೆ ಬೆಂಗಳೂರು ಬಿಟ್ಟುಹೋದ 17 ಮಂದಿ

Pinterest LinkedIn Tumblr


ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ 150 ಜನರ ಪೈಕಿ 19 ಮಂದಿ ಕ್ವಾರಂಟೈನ್​ಗೆ ಒಳಪಡಲು ನಿರಾಕರಿಸಿದ್ದಾರೆ. ಇವರೆಲ್ಲರಿಗೂ ಬೇರೆ ಸ್ಥಳಗಳಿಗೆ ಹೋಗಲು ವ್ಯವಸ್ಥೆ ಕಲ್ಪಿಸಲಾಗಿದೆ. 17 ಜನರು ಈಗಾಗಲೇ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ನಿರ್ಗಮಿಸಿದ್ದಾರೆ. ಇನ್ನಿಬ್ಬರು ಬೆಳಗ್ಗೆ ಹೊರಡಲಿದ್ದಾರೆ.

ಇವತ್ತು ರಾತ್ರಿ ಬೆಂಗಳೂರು ತೊರೆದ 17 ಮಂದಿಯಲ್ಲಿ ಒಬ್ಬರು ಮಾತ್ರ ದೆಹಲಿಗೆ ವಾಪಸ್ ಹೋಗುತ್ತಿದ್ದಾರೆ. ರಾತ್ರಿ 8:30ಕ್ಕೆ ರಾಜಧಾನಿ ಎಕ್ಸ್​ಪ್ರೆಸ್ ರೈಲಿನಲ್ಲಿ ಇವರು ಹೊರಟಿದ್ದಾರೆ. ಇನ್ನುಳಿದವರೆಲ್ಲರೂ ಆಂಧ್ರಪ್ರದೇಶಕ್ಕೆ ಹೋಗುತ್ತಿದ್ದಾರೆ. 10 ಜನರು ಸಿಕಂದರಾಬಾದ್​ಗೆ, ನಾಲ್ವರು ಅನಂತಪುರಕ್ಕೆ, ಇಬ್ಬರು ಗುಂಟ್ಕಲ್​ಗೆ ಹೊರಟಿದ್ದಾರೆ. ನಾಳೆ ಟಿಕೆಟ್ ಬುಕ್ ಆಗಿರುವ ಇಬ್ಬರು ಪ್ರಯಾಣಿಕರು ಸಿಕಂದರಾಬಾದ್​ಗೆ ಹೋಗಲಿದ್ದಾರೆ.

ದೆಹಲಿಯಿಂದ ಬಂದಿದ್ದ 150 ಜನರು ಕ್ವಾರಂಟೈನ್​ಗೆ ಒಳಪಡಲು ನಿರಾಕರಿಸಿ ಇವತ್ತು ಮುಂಜಾನೆ ಪ್ರತಿಭಟನೆ ಮಾಡಿದ್ದರು. ತಮ್ಮನ್ನು ವಾಪಸ್ ಕಳುಹಿಸಬೇಕೆಂದು ಬೇಡಿಕೆ ಇಟ್ಟ ಇವರು ರೈಲ್ವೆ ಇಲಾಖೆ ಐಜಿಪಿ ಡಿ. ರೂಪಾ ಅವರಿಗೂ ಮನವಿ ಮಾಡಿದರು. ಆ ಬಳಿಕ, ಕ್ವಾರಂಟೈನ್ ಆಗಲು ಇಚ್ಛಿಸದವರಿಗೆ ತಮ್ಮಿಚ್ಛೆಯ ಸ್ಥಳಕ್ಕೆ ಹೋಗಲು ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿತು ಎಂದು ನ್ಯೂಸ್18 ಕನ್ನಡಕ್ಕೆ ಮೂಲಗಳು ತಿಳಿಸಿವೆ.

ಒಟ್ಟು 45 ಮಂದಿ ವಾಪಸ್ ಹೋಗುತ್ತಾರೆಂಬ ಸುದ್ದಿ ಇತ್ತು. ಆದರೆ, ಇದೀಗ 19 ಮಂದಿ ವಾಪಸ್ ಹೋಗುತ್ತಿರುವುದು ದೃಢಪಟ್ಟಿದೆ. ಇನ್ನುಳಿದವರೆಲ್ಲರೂ ಬೆಂಗಳೂರಿನಲ್ಲೇ ಕ್ವಾರಂಟೈನ್​ಗೆ ಒಳಪಡಲು ಸಮ್ಮತಿಸಿದ್ದಾರೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೆಲ ಗೊಂದಲಗಳಿಂದಾಗಿ ಇದು ಆಗಿರಬಹುದು ಎಂದು ಶಂಕಿಸಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ ಹೋಗುವವರು ಅಲ್ಲಿಯೇ ಕ್ವಾರಂಟೈನ್ ಆಗಬೇಕು ಎಂದು ದೆಹಲಿಯ ರೈಲ್ವೆ ನಿಲ್ದಾಣದಲ್ಲೇ ಪ್ರಕಟಿಸಲಾಗಿತ್ತು. ಅನೇಕ ಜನರು ಆ ಪ್ರಕಟಣೆ ಕಂಡು ಅಲ್ಲಿಯೇ ವಾಪಸ್ ಹೋಗಿದ್ದರು. ಅವರ ಜಾಗಗಳಿಗೆ ವೇಟಿಂಗ್ ಲಿಸ್ಟ್​ನಲ್ಲಿದ್ದ ಇತರ ಪ್ರಯಾಣಿಕರು ಬಂದಿದ್ದಾರೆ. ಅವರಿಗೆ ಈ ನಿಯಮ ತಿಳಿದಿರಲಿಲ್ಲ ಎನಿಸುತ್ತದೆ. ಹಾಗಾಗಿ ಈ ಗೊಂದಲ ಏರ್ಪಟ್ಟಿದೆ ಎಂದು ಸುರೇಶ್ ಕುಮಾರ್ ವಿವರಣೆ ನೀಡಿದ್ಧಾರೆ.

Comments are closed.