ರಾಷ್ಟ್ರೀಯ

ಜಗತ್ತಿನಾದ್ಯಂತ ಕೊರೋನಾ ಸೋಂಕು ಹರಡಿವಿಕೆಯಲ್ಲಿ 14ನೇ ಸ್ಥಾನಕ್ಕೆ ಭಾರತ

Pinterest LinkedIn Tumblr


ನವದೆಹಲಿ(ಮೇ 07): ಕೊರೋನಾ ಸೋಂಕು ಹರಡುವಿಕೆಯನ್ನು ಕೊನೆಗಾಣಿಸಬೇಕೆಂದು ಒಂದಲ್ಲ, ಎರಡಲ್ಲ ಮೂರು ಸಲ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಆದರೆ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುವ ಬದಲಿಗೆ ಏರುಮುಖವಾಗಿ ಸಾಗಿದೆ. ಈ ನಡುವೆ ಕೇವಲ ನಾಲ್ಕೇ ದಿನದಲ್ಲಿ 10 ಸಾವಿರ ಪ್ರಕರಣಗಳು ಪತ್ತೆಯಾಗಿ ಆತಂಕ ಮೂಡಿಸಿವೆ.

ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಅಧಿಕೃತ ಮಾಹಿತಿಗಳ ಪ್ರಕಾರ ದೇಶದಲ್ಲಿ ಕಳೆದ 4 ದಿನಗಳಲ್ಲಿ ದೇಶಾದ್ಯಂತ 10 ಸಾವಿರ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. ಇದರಿಂದಾಗಿ ಜಗತ್ತಿನಾದ್ಯಂತ ಕೊರೋನಾ ಸೋಂಕು ಹರಡಿವಿಕೆಯಲ್ಲಿ ಭಾರತ 14ನೇ ಸ್ಥಾನಕ್ಕೆ ಜಿಗಿದಿದೆ. ಶೀಘ್ರವೇ 13 ಸ್ಥಾನಕ್ಕೆ ಏರುವ ಸಾಧ್ಯತೆ ಕೂಡ ಇದೆ. ಏಕೆಂದರೆ ಭಾರತ ಮತ್ತು 13 ಸ್ಥಾನದಲ್ಲಿರುವ ಪೆರು ದೇಶದ ನಡುವೆ ಕೊರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಇರುವ ವ್ಯತ್ಯಾಸ 1,412 ಮಾತ್ರ. ಗುರುವಾರ ಬೆಳಿಗ್ಗೆ ಬಿಡುಗಡೆ ಮಾಡಿರುವ ಸೋಂಕು ಪೀಡಿತರ ಸಂಖ್ಯೆ ಭಾರತದಲ್ಲಿ 53,405, ಪೆರು ದೇಶದಲ್ಲಿ 54,817 ಇದೆ.

ಇನ್ನು, ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಜನವರಿ 30ರಂದು. ಕೇರಳದಲ್ಲಿ. ನಂತರ ಕೊರೋನಾ ಸೋಂಕು ಪೀಡಿತರ ಸಂಖ್ಯೆ 3ರಿಂದ 100 ಆಗಲು 14 ದಿನ ಹಿಡಿದಿತ್ತು. 100 ರಿಂದ 1,000 ಪ್ರಕರಣ ಆಗಲು ಆನಂತರದ 14 ದಿನ ಬೇಕಾಯಿತು. 1,000ದಿಂದ 10,000 ಪ್ರಕರಣ ಪತ್ತೆಯಾಗಲು ಆನಂತರ 16 ದಿನ ತೆಗೆದುಕೊಂಡಿತು‌. 10,000ದಿಂದ 50,000 ಪ್ರಕರಣಗಳಾಗಲು 23 ದಿನ ಬೇಕಾಯಿತು. ಆದರೆ 40,000 ರಿಂದ 50,000 ಆಗಿದ್ದು ಕೇವಲ 4 ದಿನದಲ್ಲಿ ಎನ್ನುವಂಥದ್ದು ಬೆಚ್ಚಿ ಬೀಳಿಸುವ ಸಂಗತಿಯಾಗಿದೆ.

40,000 ಪ್ರಕರಣಗಳು 50,000 ಆಗಲು ತೆಗೆದುಕೊಂಡ 4 ದಿನಗಳಲ್ಲಿ ದೇಶಾದ್ಯಂತ ಲಾಕ್​ಡೌನ್ ನಿಯಮಗಳನ್ನು ಸಡಿಲಿಸಲಾಗಿತ್ತು. ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು ಎಂಬುದು ಗಮನಾರ್ಹವಾದ ಸಂಗತಿಯಾಗಿದೆ.

ಹೀಗೆ ದೇಶದಲ್ಲಿ ವ್ಯಾಪಕವಾಗಿ ಕೊರೋನಾ ಸೋಂಕು ಹರಡುತ್ತಿರುವುದು 7 ರಾಜ್ಯಗಳಲ್ಲಿ ಎಂಬುದು ಕೂಡ ಕೇಂದ್ರ ಆರೊಗ್ಯ ಇಲಾಖೆ ಮಾಹಿತಿಯಿಂದ ದೃಢಪಡುತ್ತದೆ. ಮಹಾರಾಷ್ಟ್ರ, ಗುಜರಾತ್, ದೆಹಲಿ, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ 3 ಸಾವಿರಕ್ಕಿಂತಲೂ‌ ಹೆಚ್ಚು ಜನ‌‌‌ ಕೊರೋನಾ ಪೀಡಿತರಿದ್ದಾರೆ. ಇಡೀ ದೇಶಾದ್ಯಂತ 53,405 ಜನ‌ ಕೊರೋನಾ ಪೀಡಿತರಿದ್ದರೆ ಈ 7 ರಾಜ್ಯಗಳಲ್ಲೇ 43,000 ಕೊರೋನಾ ಪೀಡಿತರಿದ್ದಾರೆ. ಅಂದರೆ ಒಟ್ಟಾರೆ ಕೊರೋನಾ ಸೋಂಕು ಪೀಡಿತರ ಸಂಖ್ಯೆಯ ಶೇಕಡಾ 80ರಷ್ಟು ಕೊರೋನಾ ಪೀಡಿತರು ಈ 7 ರಾಜ್ಯಗಳಲ್ಲೇ ಇದ್ದಾರೆ.ದೇಶದಲ್ಲಿ ಮೊದಲ ಕೊರೋನಾ ಸೋಂಕು ಕಾಣಿಸಿಕೊಂಡಿದ್ದ ಕೇರಳದಲ್ಲಿ ಮತ್ತು ದೇಶದಲ್ಲೇ ಕೊರೋನಾಗೆ ಮೊದಲ ವ್ಯಕ್ತಿ ಬಲಿಯಾದ ಕರ್ನಾಟಕದಲ್ಲಿ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿದೆ. ಕೇರಳ ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಒಂದೂ ಪ್ರಕರಣ ಪತ್ತೆಯಾಗಿಲ್ಲ. ಈ ದೃಷ್ಟಿಯಲ್ಲಿ ಕೇರಳ ಈಗ ಇಡೀ ದೇಶಕ್ಕೆ ಮಾದರಿಯಾಗಿದೆ.

Comments are closed.