ರಾಷ್ಟ್ರೀಯ

ದೇಶದ 548 ವೈದ್ಯರು, ದಾದಿಯರಿಗೂ ತಟ್ಟಿದ ಕೊರೊನಾ!

Pinterest LinkedIn Tumblr


ಹೊಸದಿಲ್ಲಿ: ಕೊರೊನಾ ಸೋಂಕಿತರ ಶುಶ್ರೂಷೆಯಲ್ಲಿ ತೊಡಗಿದ ವೈದ್ಯರಿಗೂ ಸೋಂಕು ತಗುಲುತ್ತಿರುವುದು ಹೆಚ್ಚುತ್ತಿದೆ. ದೇಶಾದ್ಯಂತ ಇದುವರೆಗೂ 548 ವೈದ್ಯರು, ದಾದಿಯರಿಗೆ ಕೊರೊನಾ ತಗುಲಿದೆ. ಅವರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಕೇಂದ್ರ ಸರಕಾರದ ಮೂಲಗಳು ಹೇಳಿವೆ.

ದಿಲ್ಲಿ ಒಂದರಲ್ಲಿಯೇ 69 ವೈದ್ಯರಿಗೆ ಹಾಗೂ 274 ದಾದಿಯರಿಗೆ ಕೊರೊನಾ ವೈರಸ್‌ ಅಂಟಿದೆ. ಈ ಅಂಕಿ-ಅಂಶಗಳಲ್ಲಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾರ್ಡ್‌ ಬಾಯ್‌ಗಳು, ಸ್ವಚ್ಛತಾ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಲಾಂಡರಿ ಮತ್ತು ಕ್ಯಾಂಟೀನ್‌ ಸಿಬ್ಬಂದಿಯ ವಿವರ ಸೇರಿಲ್ಲ.

ಹಾಗೆಯೇ ವೈದ್ಯರು ಮತ್ತು ದಾದಿಯರಿಗೆ ಸೋಂಕಿತರ ಚಿಕಿತ್ಸೆ ವೇಳೆ ಸೋಂಕು ತಾಗಿದೆಯೋ ಇಲ್ಲವೇ ಸಮುದಾಯದಿಂದ ವೈರಸ್‌ ಅಂಟಿದೆಯೋ ಎಂಬುದನ್ನೂ ಸ್ಪಷ್ಟಪಡಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

50,000 ದಾಟಿದ ಸೋಂಕಿತರ ಸಂಖ್ಯೆ
ನಾಲ್ಕು ತಿಂಗಳಿಗೂ ಹಿಂದೆ ಕೇರಳದಲ್ಲಿಮೊದಲ ಕೊರೊನಾ ಪ್ರಕರಣ ಪತ್ತೆಯಾದ ಬಳಿಕ ಇದೀಗ ದೇಶದಲ್ಲಿಸೋಂಕಿತರ ಸಂಖ್ಯೆ 50 ಸಾವಿರದ ಗಡಿ ದಾಟಿದೆ. 14 ಸಾವಿರ ಕೊರೊನಾ ಪೀಡಿತರು ಗುಣಮುಖರಾಗಿ ಮನೆಗೆ ತೆರಳಿದ್ದರೆ, 1650 ಮಂದಿ ಬಲಿಯಾಗಿದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಆತಂಕಕಾರಿ ವಿಚಾರವೆಂದರೆ ಲಾಕ್‌ಡೌನ್‌ ಸಡಿಲಿಕೆಯಾದ ಬಳಿಕ ಕಳೆದ ಕೇವಲ 3 ದಿನಗಳಲ್ಲಿ10 ಸಾವಿರ ಜನರಿಗೆ ಸೋಂಕು ತಗುಲಿದೆ. ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು ಗುರುವಾರ ಒಂದೇ ದಿನ 1233 ಪ್ರಕರಣಗಳು ವರದಿಯಾಗಿದ್ದು ಸೋಂಕಿತರ ಸಂಖ್ಯೆ 16750ರ ಗಡಿ ದಾಟಿದೆ.

ಧಾರಾವಿ ಕೊಳೆಗೇರಿಯಲ್ಲಿ ಸೋಂಕಿತರ ಸಂಖ್ಯೆ 68ಕ್ಕೆ ಏರಿದೆ. ಈ ಮಧ್ಯೆ ಕೇಂದ್ರ ಸರಕಾರ ಆಲ್ಕೋಹಾಲ್‌ ಆಧಾರಿತ ಹ್ಯಾಂಡ್‌ ಸ್ಯಾನಿಟೈಸರ್‌ಗಳ ರಫ್ತಿಗೆ ಮಾತ್ರ ನಿಷೇಧ ಹೇರಲಾಗಿದೆಯೇ ವಿನಃ ಆಲ್ಕೋಹಾಲ್‌ ರಹಿತ ಸ್ಯಾನಿಟೈಸರ್‌ಗಳನ್ನು ಕಂಪನಿಗಳು ರಫ್ತು ಮಾಡಬಹುದಾಗಿದೆ ಎಂದು ಸ್ಪಷ್ಟಪಡಿಸಿದೆ. ವೆಂಟಿಲೇಟರ್‌, ಆಮ್ಲಜನಕದ ಸಿಲಿಂಡರ್‌ ಹಲವು ವೈದ್ಯಕೀಯ ಉಪಕರಣಗಳ ರಫ್ತಿನ ಮೇಲಿನ ನಿರ್ಬಂಧ ಮುಂದುವರಿಯಲಿದೆ ಎಂದಿದೆ.

Comments are closed.