ರಾಷ್ಟ್ರೀಯ

ದೂರ ನಿಂತು ಹಾರ ಬದಲಿಸಿಕೊಂಡ ನೂತನ ವಧು-ವರರು!

Pinterest LinkedIn Tumblr


ಧರ್ (ಮಧ್ಯಪ್ರದೇಶ): ಕೊರೊನಾ ವೈರಸ್ ಸೃಷ್ಟಿಸಿರುವ ಅವಾಂತರಗಳು ಒಂದೆರಡಲ್ಲ.. ಈ ಅವಾಂತರಗಳ ನಡುವಲ್ಲೇ, ಕೆಲವೊಂದಷ್ಟು ಜನ ಸರ್ಕಾರದ ನಿಯಮಗಳನ್ನು ಪಾಲಿಸುವ ಜೊತೆಯಲ್ಲೇ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನೂ ಯಶಸ್ವಿಯಾಗಿ ನಿಭಾಯಿಸಿ ಮಾದರಿಯಾಗಿದ್ದಾರೆ.

ಮಧ್ಯಪ್ರದೇಶದ ಧರ್‌ ಎಂಬ ನಗರದಲ್ಲಿ ನಡೆದ ಮದುವೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ವಧು ವರ ಇಬ್ಬರೂ ಕೂಡಾ ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆಯಾಗಿರೋದು, ಈ ವಿವಾಹ ಕಾರ್ಯಕ್ರಮದ ವಿಶೇಷತೆ. ಕೇವಲ ವಧು, ವರ ಮಾತ್ರವಲ್ಲ ಮದುವೆಗೆ ಬಂದಿದ್ದ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು.

ಮದುವೆಯ ಅತಿ ಮುಖ್ಯ ಘಟ್ಟ ಎಂದೇ ಹೇಳಲಾಗುವ ವರ ಮಾಲೆ ಬದಲಾಯಿಸಿಕೊಳ್ಳುವ ವೇಳೆಯಲ್ಲೂ ವಧು-ವರರು ಸಾಮಾಜಿಕ ಅಂತರ ಮರೆಯಲಿಲ್ಲ. 6 ಅಡಿ ದೂರದಲ್ಲಿ ನಿಂತೇ ವಧು ವರನಿಗೆ ದೊಣ್ಣೆಯ ಸಹಾಯದಿಂದ ಹಾರ ಹಾಕಿದರು. ವರ ಕೂಡಾ ಅದೇ ದೊಣ್ಣೆಗಳನ್ನು ಹಿಡಿದುಕೊಂಡು ವಧುಗೆ ಹಾರ ಹಾಕಿದರು. ಈ ಹಾರ ಬದಲಾಯಿಸಿಕೊಂಡ ಸಂಪ್ರದಾಯದ ದೃಶ್ಯ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿವಾಹ ಕಾರ್ಯಕ್ರಮದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ವಧು ಹಾಗೂ ವರನ ಪೋಷಕರು, ಸರ್ಕಾರ ರೂಪಿಸಿರುವ ನಿಯಮದ ಅನ್ವಯವೇ ಮದುವೆ ನಡೆದಿದೆ. ನಾವು ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಹೇಳಿದರು. ಮದುವೆಗೆ ಅತಿ ಹೆಚ್ಚು ಜನರನ್ನು ಸೇರಿಸಬೇಕು, ಅದ್ದೂರಿಯಾಗಿ ಮದುವೆ ಮಾಡಬೇಕು ಎಂದು ಹೊರಟರೆ ಸುಮ್ಮನೆ ಹಣ ಖರ್ಚಾಗುತ್ತದೆ. ಸರಳವಾಗಿ ಮದುವೆ ಮಾಡುವ ಜೊತೆಯಲ್ಲೇ ನಾವು ಸಾಮಾಜಿಕ ಅಂತರವನ್ನೂ ಪಾಲಿಸಿ ಸಮಾಜಕ್ಕೆ ಮಾದರಿಯಾಗಿದ್ದೇವೆ ಎಂದು ಹೇಳಿದ್ದಾರೆ.

Comments are closed.