ರಾಷ್ಟ್ರೀಯ

ಕಾಸರಗೋಡಿನಲ್ಲಿ ಪತ್ರಕರ್ತನಿಗೆ ಕೊರೊನಾ ಸೋಂಕು: ಜಿಲ್ಲಾಧಿಕಾರಿ, ಚಾಲಕ, ಗನ್‌ಮ್ಯಾನ್‌ಗೆ ಹೋಂ ಕ್ವಾರಂಟೈನ್‌

Pinterest LinkedIn Tumblr


ಕಾಸರಗೋಡು (ಕೇರಳ): ಮಲೆಯಾಳಂ ಖಾಸಗಿ ಚಾನೆಲ್‌ನ ವರದಿಗಾರನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಅವರೊಂದಿಗೆ ಸಂಪರ್ಕ ಹೊಂದಿದ್ದ ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ಬಾಬು ಅವರು ಜಿಲ್ಲಾ ವೈದ್ಯಾಧಿಕಾರಿಗಳ ನಿರ್ದೇಶನ ಪ್ರಕಾರ ಕ್ವಾರಂಟೈನ್‌ಗೆ ತೆರಳಿದ್ದಾರೆ. ಜಿಲ್ಲಾಧಿಕಾರಿಯವರೊಂದಿಗೆ ಕಾರು ಚಾಲಕ ಹಾಗೂ ಗನ್‌ಮ್ಯಾನ್‌ ಕೂಡ ಹೋಂ ಕ್ವಾರಂಟೈನ್‌ನಲ್ಲಿರುವಂತೆ ಜಿಲ್ಲಾ ವೈದ್ಯಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಖಾಸಗಿ ಮಲೆಯಾಳಂ ಚಾನೆಲ್‌ ವರದಿಗಾರನ ಸಂಪರ್ಕದಲ್ಲಿದ್ದ ಜಿಲ್ಲಾಧಿಕಾರಿಗೆ ನಿಗಾದಲ್ಲಿರುವಂತೆ ನಿರ್ದೇಶಿಸಲಾಗಿದೆ. ಏಪ್ರಿಲ್ 19ರಂದು ಈ ಪತ್ರಕರ್ತ ಕಾಸರಗೋಡು ಜಿಲ್ಲಾಧಿಕಾರಿಗಳ ಸಂದರ್ಶನ ನಡೆಸಿದ್ದರು.

ಪತ್ರಕರ್ತನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರೊಂದಿಗೆ ಸಂಪರ್ಕವಿದ್ದ ಕಾರಣದಿಂದ ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ ಬಾಬು, ಚಾಲಕ, ಗನ್‌ಮ್ಯಾನ್‌ ಕ್ವಾರಂಟೈನ್‌ನಲ್ಲಿರಲು ತೀರ್ಮಾನಿಸಲಾಗಿದೆ.

ಇವರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು. ಕಳೆದ ಕೆಲವು ದಿನಗಳಿಂದ ಕಾಸರಗೋಡಿನ ಪತ್ರಕರ್ತರ ಮಾದರಿ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಇದರಿಂದ ಈ ಪತ್ರಕರ್ತನಿಗೆ ಸೋಂಕು ದೃಢಗೊಂಡಿರುವ ಬಗ್ಗೆ ತಿಳಿದು ಬಂದಿದೆ. ಇದಲ್ಲದೇ ಈತನೊಂದಿಗೆ ನೇರ ಸಂಪರ್ಕ ಹೊಂದಿರುವ ಕ್ಯಾಮೆರಾಮೆನ್‌, ಕಾರು ಚಾಲಕ ಸಹ ನಿಗಾದಲ್ಲಿದ್ದಾರೆ. ಇತರ ಜಿಲ್ಲೆಯ ಪತ್ರಕರ್ತರನ್ನು ಸಹ ನಿಗಾದಲ್ಲಿರುವಂತೆ ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ. ಅವರವರ ಮನೆಯವರನ್ನು ಮನೆಗಳಲ್ಲಿಯೇ ನಿಗಾದಲ್ಲಿರುವಂತೆ ಸೂಚನೆ ನೀಡಲಾಗಿದೆ.

ಕೇರಳದಲ್ಲಿ ಅತೀ ಹೆಚ್ಚು ಕೊರೊನಾ ಸೋಂಕು ದೃಢಗೊಂಡಿದ್ದು, ಕಾಸರಗೋಡು ಜಿಲ್ಲೆಯಲ್ಲಿ. 169 ಮಂದಿಯಲ್ಲಿ ಕೊರೆನಾ ವೈರಸ್‌ ಕಾಣಿಸಿಕೊಂಡಿತ್ತು. ಇದೀಗ ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ನಿರಂತರ ಪರಿಶ್ರಮದ ಫಲವಾಗಿ ಕೇವಲ 13 ಮಂದಿ ಮಾತ್ರ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಉಳಿದವರೆಲ್ಲ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

Comments are closed.