ರಾಷ್ಟ್ರೀಯ

ದೇಶದಲ್ಲಿ 24,942 ಕೊರೊನಾ ವೈರಸ್ ಸೋಂಕಿತರು; 5,209 ಗುಣಮುಖ

Pinterest LinkedIn Tumblr


ಹೊಸದಿಲ್ಲಿ: ಕೊರೊನಾ ವೈರಸ್ ಸೋಂಕು ದೇಶದಲ್ಲಿ ಹೆಚ್ಚುತ್ತಲೇ ಇದೆ. ಆದರೂ ಲಾಕ್‌ಡೌನ್ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ಒಂದು ಹಂತದ ವರೆಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.

ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಬಿಡುಗಡೆ ಮಾಡಿರುವ ತಾಜಾ ವರದಿಗಳ ಪ್ರಕಾರ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 24,942ಕ್ಕೆ ಏರಿಕೆಯಾಗಿದೆ.

ಈ ಪೈಕಿ 5,209 ಮಂದಿ ಸಂಪೂರ್ಣವಾಗಿ ಗುಣಮುಖವಾಗಿದ್ದಾರೆ. ಅತ್ತ 779 ಮಂದಿ ಸಾವಿಗೆ ಶರಣಾಗಿದ್ದಾರೆ. ಅದೇ ಹೊತ್ತಿಗೆ 18,953 ಪ್ರಕರಣಗಳು ಸಕ್ರಿಯವಾಗಿದೆ.

ಕೊರೊನಾ ಲಾಕ್‌ಡೌನ್ 5ನೇ ವಾರ: ಭಾರತದ ಸದ್ಯದ ಸ್ಥಿತಿಗತಿ ಏನು?

ಕೊರೊನಾಲಜಿ:
ಒಟ್ಟು ಸೋಂಕಿತರು: 24,942
ಮರಣ: 779
ಗುಣಮುಖ: 5,209
ಸಕ್ರಿಯ ಪ್ರಕರಣಗಳು: 18,953

ಈ ಪೈಕಿ ಕಳೆದ 24 ತಾಸಿನಲ್ಲಿ 1,490 ಹೊಸ ಪ್ರಕರಣಗಳು ದಾಖಲಾಗಿದೆ. ಹಾಗೆಯೇ ಕಳೆದೊಂದು ದಿನದಲ್ಲಿ 56 ಸಾವಿನ ಪ್ರಕರಣಗಳು ದಾಖಲಾಗಿದೆ.

ಭಾರತದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮೇ 3ರ ವರೆಗೆ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಅದೇ ಹೊತ್ತಿಗೆ ಹಾಟ್ ಸ್ಪಾಟ್ ಅಲ್ಲದ ಪ್ರದೇಶಗಳಲ್ಲಿ ಕೇಂದ್ರ ಹಾಗೂ ಆಯಾ ರಾಜ್ಯ ಸರಕಾರಗಳು ಲಾಕ್‌ಡೌನ್‌ನಲ್ಲಿ ಅಲ್ಪ ಸಡಿಲಿಕೆಯನ್ನು ಮಾಡಿದೆ.

ಏತನ್ಮಧ್ಯೆ 100ಕ್ಕೂ ಹೆಚ್ಚು ಪ್ರಕರಣ ದಾಖಲಾದ ಬಳಿಕ ಶನಿವಾರದಂದು ಇದೇ ಮೊದಲ ಬಾರಿಗೆ ಕೋವಿಡ್ ಸೋಂಕಿತರ ಬೆಳವಣಿಗೆ ಸರಾಸರಿಯು ಅತ್ಯಂತ ಕಡಿಮೆ ದಾಖಲಾಗಿದೆ.

ಶುಕ್ರವಾರ ಬೆಳಗ್ಗೆ 8ರಿಂದ ಶನಿವಾರ ಬೆಳಗ್ಗೆ 8 ಗಂಟೆಯ ಮಧ್ಯೆ ಶೇಕಡಾ 6ರಷ್ಟು ಮಾತ್ರ ಕೋವಿಡ್ ಸೋಂಕಿತರ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯು ತಿಳಿಸಿದೆ.

ಅಂದ ಹಾಗೆ ದೇಶದ ಸಾವಿನ ಪ್ರಮಾಣವು ಶೇಕಡಾ 3.1 ಆಗಿದ್ದು, ಚೇತರಿಕೆ ಪ್ರಮಾಣವು ಶೇಕಡಾ 20ಕ್ಕಿಂತಲೂ ಹೆಚ್ಚು ದಾಖಲಾಗಿದೆ. ಹಾಗೆಯೇ ಸೋಂಕಿತರ ಪ್ರಮಾಣದಲ್ಲಿ ದ್ವಿಗುಣಗೊಳ್ಳುವ ದಿನಗಳು 9.1ಕ್ಕೆ ಏರಿಕೆಯಾಗಿರುವುದು ಸಮಾಧಾನಕರ ಅಂಶವಾಗಿದೆ.

Comments are closed.