ರಾಷ್ಟ್ರೀಯ

ಲಾಕ್‌ಡೌನ್ ಸಡಿಲಿಕೆಗೆ ಮುಂದಾದ ಕೇಂದ್ರ; ಯಾವುದು ತೆರೆಯುತ್ತದೆ, ಯಾವುದು ಇಲ್ಲ… ಈ ಬಗ್ಗೆ ಇಲ್ಲಿದೆ ಮಾಹಿತಿ

Pinterest LinkedIn Tumblr

ನವದೆಹಲಿ: ಕೊರೋನಾ ಭೀತಿಯ ನಡುವೆ ಕೊನೆಗೂ ಕೇಂದ್ರ ಸರ್ಕಾರ ಒಂದು ತಿಂಗಳ ನಂತರ ಲಾಕ್‌ಡೌನ್ ನಿಯಮವನ್ನು ಸಡಿಲಿಕೆ ಮಾಡಿದ್ದು, ಪುರಸಭೆ ಮಟ್ಟದ ವಾಣಿಜ್ಯ-ವಸತಿ ಸಂಕೀರ್ಣ ಮತ್ತು ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅನುಮತಿ ನೀಡಿದೆ.

ನಿನ್ನೆ ತಡರಾತ್ರಿ ಆದೇಶವನ್ನು ಹೊರಡಿಸಿರುವ ಗೃಹ ಸಚಿವಾಲಯ ಗ್ರಾಮೀಣ ಮಟ್ಟದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಅನಿವಾರ್ಯವಲ್ಲದ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಿದೆ. ಅಲ್ಲದೆ, ಎಲ್ಲಾ ಅಂಗಡಿಗಳನ್ನೂ ತೆರೆಯಲು ಮತ್ತು ಎಲ್ಲಾ ರೀತಿಯ ಸರಕುಗಳ ಮಾರಾಟಕ್ಕೂ ಹಸಿರು ನಿಶಾನೆ ನೀಡಿದೆ. ಈ ಮೂಲಕ ಲಾಕ್‌ಡೌನ್‌ನಿಂದಾಗಿ ಸಾರ್ವಜನಿಕರಲ್ಲಿ ಮೂಡಿದ್ದ ಆತಂಕವನ್ನು ದೂರ ಮಾಡಿದೆ.

ಕೇಂದ್ರ ಸರ್ಕಾರದ ಆದೇಶದ ಪ್ರತಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಸಹಿ ಮಾಡಿದ್ದಾರೆ. ಆದಾಗ್ಯೂ ಈ ಆದೇಶದಲ್ಲಿ ಪುರಸಭೆ ವ್ಯಾಪ್ತಿಯಲ್ಲಿರುವ ಮಾರುಕಟ್ಟೆ ಸ್ಥಳಗಳಲ್ಲಿನ ಮಲ್ಟಿ-ಬ್ರಾಂಡ್ ಮತ್ತು ಸಿಂಗಲ್ ಬ್ರಾಂಡ್ ಮಾಲ್‌ಗಳು ಮೇ 3 ರವರೆಗೆ ಕಡ್ಡಾಯವಾಗಿ ಮುಚ್ಚಲ್ಪಟ್ಟಿರುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ.

ಎರಡನೇ ಸುತ್ತಿನ ಲಾಕ್ ಡೌನ್ ಮೇ3ಕ್ಕೆ ಕೊನೆಯಾಗಲಿದ್ದು ಇದೀಗ ಕೆಲವು ವ್ಯಾಪಾರ ವಹಿವಾಟುಗಳಿಗೆ ವಿನಾಯ್ತಿ ನೀಡಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ತುಸು ನಿರಾಳತೆ ನೀಡಿರುವುದಂತೂ ಖಂಡಿತ.

ಹಾಗಾದರೆ ಇಂದಿನಿಂದ ಕೇಂದ್ರ ಸರ್ಕಾರ ವಿನಾಯ್ತಿ ತೋರಿಸಿರುವ ವಹಿವಾಟುಗಳು ಯಾವುದು, ಲಾಕ್ ಡೌನ್ ಮುಂದುವರಿಕೆ ಯಾವುದಕ್ಕೆ ಎಂಬ ಕುರಿತು ಇಲ್ಲಿದೆ ಮಾಹಿತಿ.

ಇಂದಿನಿಂದ ತೆರೆಯಲ್ಪಡುವ ಉದ್ದಿಮೆಗಳು:

ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಂಗಡಿಗಳು ಮತ್ತು ಸ್ಥಾಪನೆ ಕಾಯ್ದೆ ಅಡಿ ದಾಖಲಾತಿ ಹೊಂದಿರುವ ಅಂಗಡಿಗಳು, ಜನವಸತಿ ಸಂಕೀರ್ಣಗಳಲ್ಲಿರುವ ಅಂಗಡಿಗಳು, ಮಾರುಕಟ್ಟೆ ಸಂಕೀರ್ಣಗಳು, ನಗರ ಪಾಲಿಕೆ, ನಗರ ಪಾಲಿಕೆ ನಿಗಮಗಳು ಮತ್ತು ನಗರ ಪಾಲಿಕೆ ಹೊರಗೆ ಅಂಗಡಿಗಳಿಗೆ ವ್ಯಾಪಾರ-ವಹಿವಾಟುಗಳಿಗೆ ಅವಕಾಶ.
ಜನವಸತಿ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ಮಾರುಕಟ್ಟೆಗಳಲ್ಲಿರುವ ಅಂಗಡಿಗಳಿಗೆ ತೆರೆಯಲು ಅನುಮತಿ.
ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳಲ್ಲಿ ದಾಖಲಾತಿ ಹೊಂದಿರುವ ಎಲ್ಲಾ ಅಂಗಡಿಗಳು ಮತ್ತು ಮಾರುಕಟ್ಟೆಗಳಿಗೆ ಅನುಮತಿ. ನಗರಗಳಲ್ಲಿ ಸಣ್ಣ ಅಂಗಡಿಗಳು, ಜನವಸತಿ ಪ್ರದೇಶಗಳಲ್ಲಿರುವ ಅಂಗಡಿಗಳಿಗೆ ವಹಿವಾಟುಗಳಿಗೆ ಅನುಮತಿ.
ಮಾರುಕಟ್ಟೆ ಕಾಂಪ್ಲೆಕ್ಸ್ ಹೊರತುಪಡಿಸಿ ಬೇರೆ ಕಡೆಗಳಲ್ಲಿ ಸಲೂನ್, ಕ್ಷೌರದಂಗಡಿಗಳಿಗೆ ತೆರೆಯಲು ಅವಕಾಶ.
ಜನವಸತಿ ಪ್ರದೇಶಗಳಲ್ಲಿ ಸಣ್ಣ ಪ್ರತ್ಯೇಕ ಪ್ರತ್ಯೇಕವಾಗಿರುವ ಟೈಲರಿಂಗ್ ಅಂಗಡಿಗಳು.
ಅನುಮತಿ ನೀಡಿರುವ ಅಂಗಡಿಗಳಲ್ಲಿ ಶೇಕಡಾ 50ರ ಪ್ರಮಾಣದಲ್ಲಿ ಕೆಲಸಗಾರರನ್ನು ಇಟ್ಟುಕೊಳ್ಳಬಹುದು.ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್, ಗ್ಲೌಸ್ ಧರಿಸಿ ಕೆಲಸ ಮಾಡಬೇಕು.
ಯಾವುದು ಮುಚ್ಚಿರುತ್ತದೆ?

-ಮಾಲ್ ಗಳು ಮತ್ತು ಸಿನೆಮಾ ಹಾಲ್.

-ಜನದಟ್ಟಣೆ ಸೇರುವ ಸರಣಿ ಅಂಗಡಿ ಪ್ರದೇಶಗಳು ಉದಾಹರಣೆಗೆ ಖಾನ್ ಮಾರುಕಟ್ಟೆ, ಗ್ರೇಟರ್ ಕೈಲಾಶ್, ನೆಹರೂ ಪ್ಲೇಸ್ ನಂತಹ ಪ್ರದೇಶಗಳು.

-ನಗರ ಪಾಲಿಕೆ ಮತ್ತು ಪಾಲಿಕೆ ಪ್ರದೇಶಗಳ ಹೊರಗಿರುವ ಮಲ್ಟಿ ಬ್ರಾಂಡ್ ಮತ್ತು ಸಿಂಗಲ್ ಬ್ರಾಂಡ್ ಮಾಲ್ ಗಳು.

-ಶಾಪಿಂಗ್ ಕಾಂಪ್ಲೆಕ್ಸ್, ಮಾರುಕಟ್ಟೆ ಸಂಕೀರ್ಣಗಳಲ್ಲಿರುವ ಅಂಗಡಿಗಳು, ಮಲ್ಟಿ ಬ್ರಾಂಡ್ ಮತ್ತು ಸಿಂಗಲ್ ಬ್ರಾಂಡ್ ಮಾಲ್ ಗಳು.

-ಜಿಮ್ನಾಸ್ಟಿಕ್ ಕೇಂದ್ರಗಳು, ಕ್ರೀಡಾ ಸಂಕೀರ್ಣಗಳು, ಸ್ವಿಮ್ಮಿಂಗ್ ಪೂಲ್, ಥಿಯೇಟರ್, ಬಾರ್, ರೆಸ್ಟೋರೆಂಟ್, ಆಡಿಟೋರಿಯಂ

-ಲಿಕ್ಕರ್ ಶಾಪ್

-ಬೊಟಿಕ್, ಬ್ಯೂಟಿ ಪಾರ್ಲರ್ ಗಳು ತೆರೆದಿರುವುದಿಲ್ಲ.

Comments are closed.