ರಾಷ್ಟ್ರೀಯ

ವಿದೇಶದಲ್ಲಿರುವ ಭಾರತೀಯರಿಗೆ ಇನ್ನೂ ಕೆಲವು ದಿನಗಳು ಅಲ್ಲೇ ಇರುವಂತೆ ಕೇಂದ್ರ ಸೂಚನೆ

Pinterest LinkedIn Tumblr


ಹೊಸದಿಲ್ಲಿ: ಕೊರೊನಾ ವೈರಸ್‌ನಿಂದಾಗಿ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸದ್ಯಕ್ಕೆ ಅಲ್ಲಿಂದ ತವರಿಗೆ ವಾಪಸ್‌ ಕರೆಸಿಕೊಳ್ಳುವ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ಗುರುವಾರ ದೃಢಪಡಿಸಿವೆ.

“ವಿದೇಶಗಳಲ್ಲಿ ಸಿಲುಕಿರುವ ಭಾರತೀಯರಿಗೆ ಕೆಲ ದಿನಗಳ ಕಾಲ ಅಲ್ಲೇ ಇರಲು ಸೂಚಿಸಲಾಗಿದೆ. ಭಾರತೀಯ ರಾಯಭಾರಿ ಕಚೇರಿಗಳು ಅವರಿಗೆ ಸಹಾಯ ಮಾಡಲಿದ್ದಾರೆ. 53 ದೇಶಗಳಲ್ಲಿರುವ ಒಟ್ಟು 3,336 ಭಾರತೀಯರಿಗೆ ಕೋವಿಡ್ -19 ಪಾಸಿಟಿವ್‌ ಇದೆ. ಇದರಲ್ಲಿ 25 ಭಾರತೀಯರು ವಿದೇಶಗಳಲ್ಲಿಯೇ ಸಾವಿಗೀಡಾಗಿದ್ದಾರೆ,” ಎಂದು ಮೂಲಗಳು ತಿಳಿಸಿವೆ.

“ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ವಿಶ್ವದಾದ್ಯಂತ ಸಿಕ್ಕಿಹಾಕಿಕೊಂಡಿರುವ ಸುಮಾರು 20,000 ಭಾರತೀಯರಿಗೆ ವಿಮಾನಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಭಾರತ ಸರ್ಕಾರ ಈ ಹಿಂದೆ ತಿಳಿಸಿತ್ತು. ಇದೀಗ ಇದನ್ನು ಮೇ 3 ರವರೆಗೆ ವಿಸ್ತರಿಸಲಾಗಿದೆ. ಆದ್ದರಿಂದ ವಿದೇಶಗಳಲ್ಲಿರುವ ಭಾರತೀಯರು ಇನ್ನೂ ಮೂರು ವಾರಗಳ ಕಾಲ ಅಲ್ಲೇ ಇರುವುದು ಖಾಯಂ ಆಗಿದೆ.

“ಚೀನಾದಿಂದ ಕಳುಹಿಸಲಾಗಿರುವ 6,50,000 ಕೊರೊನಾ ವೈರಸ್‌ ಪರೀಕ್ಷಾ ಕಿಟ್‌ಗಳು ಇಂದು ಭಾರತಕ್ಕೆ ತಡವಾಗಿ ತಲುಪಲಿವೆ. ಆ ಮೂಲಕ ಭಾರತ ಪಿಪಿಇ ಕಿಟ್‌ಗಳ ದೊಡ್ಡ ಸರಕನ್ನು ಪಡೆಯಲಿದೆ,” ಎಂದು ಮೂಲಗಳು ತಿಳಿಸಿವೆ.

ಭಾರತವು ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ವಾಣಿಜ್ಯ ಮಾರಾಟವಾಗಿ ಅಥವಾ 55 ದೇಶಗಳಿಗೆ ಅನುದಾನವಾಗಿ ಒದಗಿಸುತ್ತಿದೆ. ಇಪ್ಪತ್ತೊಂದು ದೇಶಗಳು ಇದನ್ನು ವಾಣಿಜ್ಯ ಮಾರಾಟವಾಗಿ ಪಡೆಯಲು ಮುಂದಾಗಿವೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಪಡೆಯುವ ಮೊದಲ ಪಟ್ಟಿಯಲ್ಲಿರುವ ಅಮೆರಿಕ ಸೇರಿದಂತೆ 13 ದೇಶಗಗಳು ಎಲ್ಲಾ ವಿಧಿವಿಧಾನಗಳನ್ನು ಭಾರತದೊಂದಿಗೆ ಪೂರ್ಣಗೊಳಿಸಿವೆ ಎಂದು ಮೂಲಗಳು ತಿಳಿಸಿವೆ.

ವಿಶ್ವದ ಹೈಡ್ರಾಕ್ಸಿಕ್ಲೋರೋಕ್ವಿನ್ ಪೂರೈಕೆಯಲ್ಲಿ ಸುಮಾರು 70 ಪ್ರತಿಶತದಷ್ಟು ಉತ್ಪಾದಿಸುವ ಭಾರತ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೋರಿಕೆಯ ಮೇರೆಗೆ ಅಮೆರಿಕಕ್ಕೆ ಇತ್ತೀಚೆಗೆ ಔಷಧಿಯನ್ನು ರಫ್ತು ಮಾಡಲು ಒಪ್ಪಿಕೊಂಡಿತ್ತು. ಅದರಂತೆ ಮೊದಲ ಹಂತದಲ್ಲಿ ಔಷಧಿಯನ್ನು ಯುಎಸ್‌ಗೆ ಪೂರೈಸಿತ್ತು.

ಪರೀಕ್ಷೆ ಅವಧಿಯಲ್ಲಿ ತೃಪ್ತಿದಾಯಕ ಫಲಿತಾಂಶಗಳನ್ನು ಕಾಣದ ಹೊರತು ಕೋವಿಡ್ -19 ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಶಿಫಾರಸು ಮಾಡುವುದಿಲ್ಲ ಎಂದು ಕಳೆದ ವಾರ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ತಿಳಿಸಿತ್ತು.

Comments are closed.