ರಾಷ್ಟ್ರೀಯ

ಓರಿಸ್ಸಾ, ಪಂಜಾಬ್ ನಂತರ ಲಾಕ್​ಡೌನ್​ ವಿಸ್ತರಿಸಿದ ಮಹಾರಾಷ್ಟ್ರ, ಪಶ್ಚಿಮಬಂಗಾಳ

Pinterest LinkedIn Tumblr


ನವದೆಹಲಿ: ಮಾರಕ ಕೊರೋನಾ ವೈರಸ್ ಹೆಮ್ಮಾರಿ ದೇಶದಲ್ಲಿ ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಲೇ ಇದೆ. ದೇಶಾದ್ಯಂತ ಲಾಕ್​ಡೌನ್​ ಹೇರಿದ ಬಳಿಕ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಓರಿಸ್ಸಾ ಮತ್ತು ಪಂಜಾಬ್ ರಾಜ್ಯ ಸರ್ಕಾರಗಳು ಲಾಕ್​ಡೌನ್​ ಅನ್ನು ಈ ತಿಂಗಳಾಂತ್ಯಕ್ಕೆ ವಿಸ್ತರಿಸಿವೆ. ಇದೀಗ ಮಹಾರಾಷ್ಟ್ರ ಮತ್ತು ಪಶ್ಚಿಮಬಂಗಾಳ ಸರ್ಕಾರಗಳು ಲಾಕ್​ಡೌನ್​ ವಿಸ್ತರಿಸುವ ಮೂಲಕ ಓರಿಸ್ಸಾ, ಪಂಜಾಬ್ ನಡೆ ಅನುಸರಿಸಿವೆ.

ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಅವರು ರಾಜ್ಯದಲ್ಲಿ ಲಾಕ್​ಡೌನ್​ ವಿಸ್ತರಣೆ ಮಾಡಿದ್ದಾರೆ. ರಾಜ್ಯದಲ್ಲಿ ನಿಯಂತ್ರಣ ಮೀರಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡುವ ಮುನ್ನವೇ ಮಹಾರಾಷ್ಟ್ರದಲ್ಲಿ ಲಾಕ್​ಡೌನ್ ವಿಸ್ತರಿಸಿ ಘೋಷಣೆ ಮಾಡಲಾಗಿದೆ.

ಹಾಗೆಯೇ, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೂಡ ಲಾಕ್​ಡೌನ್ ವಿಸ್ತರಿಸಿ ಘೋಷಣೆ ಮಾಡಿದ್ದಾರೆ. ಜೂನ್ 10ರವರೆಗೂ ಪಶ್ಚಿಮಬಂಗಾಳದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಮಾರಕ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಮಾರ್ಚ್ 24ರಿಂದ ಏಪ್ರಿಲ್ 14ರವರೆಗೆ ಒಟ್ಟು 21 ದಿನಗಳ ಕಾಲ ದೇಶವನ್ನು ಲಾಕ್​ಡೌನ್​ ಮಾಡಲಾಗಿದೆ. ಏತನ್ಮಧ್ಯೆ ಮಾರಕ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮಂಗಳವಾರಕ್ಕೆ ಮುಕ್ತಾಯಗೊಳ್ಳಲಿರುವ ಲಾಕ್​ಡೌನ್​ಅನ್ನು ವಿಸ್ತರಿಸುವ ಸಂಬಂಧ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದರು. ಈ ವೇಳೆ ಲಾಕ್​ಡೌನ್​ ವಿಸ್ತರಣೆ ಮಾಡುವಂತೆ ಎಲ್ಲ ಮುಖ್ಯಮಂತ್ರಿಗಳು ಒಲವು ತೋರಿದರು. ಹೀಗಾಗಿ ಏಪ್ರಿಲ್ 30ರವರೆಗೂ ಲಾಕ್​ಡೌನ್ ವಿಸ್ತರಣೆಯಾಗಲಿದೆ. ಈ ಸಂಬಂಧ ಪ್ರಧಾನಿ ಮೋದಿ ಅವರು ಇಂದು ಅಥವಾ ನಾಳೆ ಘೋಷಣೆ ಮಾಡಲಿದ್ದಾರೆ.

ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 7,529ಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರ ಸಂಖ್ಯೆ 242 ಏರಿದೆ. ಕಳೆದ 24 ಗಂಟೆಯಲ್ಲಿ 1035 ಪ್ರಕರಣಗಳು ದಾಖಲಾಗುವೆ. ಈವರೆಗೂ ಒಂದು ದಿನದಲ್ಲಿ ದಾಖಲಾದ ಅತೀಹೆಚ್ಚಿನ ಸಂಖ್ಯೆ ಇದಾಗಿದೆ. ಅಲ್ಲದೇ ಕಳೆದ ಒಂದು ದಿನದಲ್ಲಿ 40 ಮಂದಿ ಮೃತಪಟ್ಟಿದ್ದಾರೆ.

Comments are closed.