
ನವದೆಹಲಿ:ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಒಡಿಶಾ ಸರ್ಕಾರ ಲಾಕ್ ಡೌನ್ ಅನ್ನು ಏಪ್ರಿಲ್ 30ರವರೆಗೆ ಮುಂದುವರಿಸಿದ್ದು, ಇದೀಗ ಪಂಜಾಬ್ ಕೂಡಾ ಲಾಕ್ ಡೌನ್ ಅನ್ನು ಮೇ 1ರವರೆಗೆ ಮುಂದುವರಿಸಲು ನಿರ್ಧರಿಸಿದೆ. ಇದರೊಂದಿಗೆ ಲಾಕ್ ಡೌನ್ ಮುಂದುವರಿಸಿದ 2ನೇ ರಾಜ್ಯವಾಗಿದೆ.
ಸಚಿವ ಸಂಪುಟದ ಜತೆ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಚರ್ಚೆ ನಡೆಸಿದ ಬಳಿಕ ಲಾಕ್ ಡೌನ್ ಮುಂದುವರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಪಂಜಾಬ್ ನಲ್ಲಿ ಕೋವಿಡ್ ಸೋಂಕು ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮುಂದುವರಿಸಲು ನಿರ್ಧರಿಸಲಾಗಿದೆ. ಪಂಜಾಬ್ ನಲ್ಲಿ ಒಟ್ಟು ಸೋಂಕು ಪೀಡಿತರ ಸಂಖ್ಯೆ 132ಕ್ಕೆ ಏರಿದ್ದು, 11 ಜನರು ಸಾವನ್ನಪ್ಪಿದ್ದಾರೆ.
ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ 21 ದಿನಗಳ ಲಾಕ್ ಡೌನ್ ಏ.14ಕ್ಕೆ ಅಂತ್ಯಗೊಳ್ಳಲಿದೆ. ಅಲ್ಲದೇ ರಾಜ್ಯದಲ್ಲಿ ಏ.15ರಿಂದ ಮತ್ತೆ ಲಾಕ್ ಡೌನ್ ಮುಂದುವರಿಸಲು ಸಚಿವ ಸಂಪುಟ ಸಭೆಯಲ್ಲಿ ಇಂದು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
Comments are closed.