
ಎರ್ನಾಕುಲಂ (ಕೇರಳ): ಕೊರೊನಾ ಲಾಕ್‌ಡೌನ್ ಉಲ್ಲಂಘಿಸಿ ಬೈಕ್‌ನಲ್ಲಿ ತಿರುಗಾಡುತ್ತಿದ್ದ ಯುವಕನ ವಿರುದ್ಧ ಆತನ ಪತ್ನಿಯೇ ಪೊಲೀಸರಿಗೆ ಮಾಹಿತಿ ನೀಡಿದ ಪ್ರಸಂಗವೊಂದು ಕೇರಳದ ಎರ್ನಾಕುಲಂ ಜಿಲ್ಲೆಯ ಮೂವಾಟ್ಟುಪುಳದಲ್ಲಿ ಮಂಗಳವಾರ ನಡೆದಿದೆ.
ಕೇರಳದಲ್ಲಿ ಕೊರೊನಾ ಹಾವಳಿ ತೀವ್ರವಾಗಿದೆ. ಪತ್ನಿಯೊಂದಿಗೆ ಬೇರೆ ಮನೆಯಲ್ಲಿರುವ ಈ ಯುವಕ, ಮನೆಯಲ್ಲಿರುವುದು ಬಿಟ್ಟು ತನ್ನ ಪೋಷಕರ ಮನೆಗೆ ನಿತ್ಯವೂ ಬೈಕ್‌ನಲ್ಲಿಓಡಾಡುತ್ತಿದ್ದ. ಇದರಿಂದ ಕುಪಿತಗೊಂಡ ಆತನ ಪತ್ನಿ, ಸ್ಥಳೀಯ ಠಾಣಾಧಿಕಾರಿಗೆ ಪೋನ್ ಕರೆ ಮಾಡಿ, ಗಂಡ ಪ್ರಯಾಣಿಸುತ್ತಿದ್ದ ಬೈಕ್ ನೋಂದಣಿ ಸಂಖ್ಯೆ ನೀಡಿ ಲಾಕ್‌ಡೌನ್ ಉಲ್ಲಂಘನೆ ಕೇಸು ದಾಖಲಿಸುವಂತೆ ಮನವಿ ಮಾಡಿದ್ದಾಳೆ.
ಮಹಿಳೆಯ ಆಗ್ರಹವನ್ನು ಕೇಳಿ ತಬ್ಬಿಬ್ಬಾದ ಪೊಲೀಸರು, ಆರಂಭದಲ್ಲಿ ಇದೊಂದು ಕೌಟುಂಬಿಕ ಕಲಹದ ಪ್ರಕರಣ ಇರಬಹುದು ಎಂದು ಮಹಿಳೆಯ ಮನವೊಲಿಸಲು ಮುಂದಾದರು. ಆದ್ರೆ, ಅದಕ್ಕೊಪ್ಪದ ಆಕೆ, ಗಂಡ ಹೊರಗಡೆ ಓಡಾಡುತ್ತಲೇ ಇದ್ದರೆ ರೋಗ ಹೊತ್ತು ತರುವ ಸಾಧ್ಯತೆ ಇದ್ದು, ತನಗೂ ಹರಡಬಹದು. ಹೀಗಾಗಿ ಆತನ ವಿರುದ್ಧ ಕೇಸು ದಾಖಲಿಸಲೇಬೇಕು ಎಂದು ಒತ್ತಾಯಿಸಿದ್ದಾಳೆ. ಬಳಿಕ ಪೊಲೀಸರು ಆತನಿಗೆ ವಿಚಾರಣೆಗಾಗಿ ಠಾಣೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
‘ಎರ್ನಾಕುಲಂ ಮಹಿಳೆಯ ಈ ನಡೆ ಕೊಂಚ ಅತಿರೇಕ ಅನ್ನಿಸಿದ್ರೂ ಕೂಡಾ, ಇಂದಿನ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ ಎಂದೇ ಹೇಳಬೇಕು. ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗೆ ಮನೆಯಲ್ಲಿಯೇ ಇರಬೇಕಾದ್ದು ಅತ್ಯಗತ್ಯ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮನೆಯಿಂದ ಹೊರಗೆ ಓಡಾಡುವ ಮೂಲಕ, ತಾವು ಸೋಂಕಿತರಾಗುವ ಜೊತೆಯಲ್ಲೇ ತಮ್ಮ ಕುಟುಂಬದವರನ್ನೂ ಅಪಾಯಕ್ಕೆ ದೂಡಬಾರದು.
Comments are closed.