ರಾಷ್ಟ್ರೀಯ

ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 108 ಜನರಿಗೆ ಕೊರೋನಾ

Pinterest LinkedIn Tumblr


ನವದೆಹಲಿ(ಏ.02): ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ವೈರಸ್​ ಅಟ್ಟಹಾಸ ಮುಂದುವರೆದಿದೆ. ಇದುವರೆಗೂ 219 ಕೊರೋನಾ ಪಾಸಿಟಿವ್​​ ಪ್ರಕರಣಗಳು ಪತ್ತೆಯಾಗಿವೆ. ದೆಹಲಿಯ ನಿಜಾಮುದ್ದೀನ್ ಪ್ರದೇಶ ಅಲಾಮಿ ಮಾರ್ಕಾಜ್ ಬಂಗ್ಲೆವಾಲಿ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 2,364 ಮಂದಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಇವರಲ್ಲಿ 108 ಮಂದಿಗೆ ಸೋಂಕು ಇರುವುದು ಧೃಡಪಟ್ಟಿದೆ. 51 ಮಂದಿ ರೋಗಿಗಳ ಟ್ರಾವೆಲ್​​ ಇತಿಹಾಸ ನಮ್ಮ ಬಳಿ ಇದೆ. ಇನ್ನು 28 ಮಂದಿ ವಿದೇಶಿಗರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎಂದು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​​ ತಿಳಿಸಿದ್ದಾರೆ.

ಈ ಹಿಂದೆಯೇ ಸಿಎಂ ಅರವಿಂದ್​ ಕೇಜ್ರಿವಾಲ್​​, ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡುವಾಗ ಮಡಿಯುವ ವೈದ್ಯರಿಗೆ 1 ಕೋಟಿ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಮತ್ತು ಆರೋಗ್ಯ ಸೇವೆ ಮಾಡುವ ಸಿಬ್ಬಂದಿಗೆ ಮೊದಲು ಸೋಂಕು ತಗಲುವ ಸಾಧ್ಯತೆ ಇದೆ. ಇದರಿಂದ ಜೀವಕ್ಕೆ ಅಪಾಯವಿದೆ ಎಂದು ಹಲವರಲ್ಲಿ ಆತಂಕ ಇದೆ. ಇಂತವರಿಗೆ ಧೈರ್ಯ ತುಂಬುವ ಸಲುವಾಗಿ ಒಂದು ವೇಳೆ ಆರೋಗ್ಯ ಸೇವೆಯಲ್ಲಿ ಯಾರಾದರೂ ಮಡಿದರೇ ದೆಹಲಿ ಸರ್ಕಾರ 1 ಕೋಟಿ. ರೂ ಪರಿಹಾರ ನೀಡಲಿದೆ ಎಂದು ಪ್ರಕಟಿಸಿದ್ದರು.

ಇತ್ತೀಚೆಗೆ ದೇಶಾದ್ಯಂತ ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಲ್ಲಿ ಕೊರೋನಾ ವೈರಸ್ ದೃಢಪಟ್ಟ ಪ್ರಕರಣಗಳು ಹೆಚ್ಚಾಗುತ್ತಿವೆ. ವೈದ್ಯರಲ್ಲಿ ಕೊರೋನಾ ವೈರಸ್‌ ಪಾಸಿಟಿವ್ ವರದಿ ಬಂದ ವೈದ್ಯರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ವೈದ್ಯಕೀಯ ಸಿಬ್ಬಂದಿಯೋ ಆತಂಕಕ್ಕೀಡಾಗಿದ್ದಾರೆ. ಈಗಾಗಲೇ ದೆಹಲಿಯಲ್ಲಿ 69 ವೃದ್ಧೆ ಮಾರಕ ವೈರಸ್​ಗೆ ಬಲಿಯಾಗಿರುವುದು ಇದಕ್ಕೆ ಕಾರಣ ಎನ್ನಬಹುದು.

ಇದುವರೆಗೂ ಭಾರತದಲ್ಲಿ ಸುಮಾರು 2000 ಜನರಿಗೆ ಕೊರೋನಾ ಸೋಂಕು ಹರಡಿದ್ದು, ಸಾವಿನ ಸಂಖ್ಯೆ 50 ಮುಟ್ಟಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 335ಕ್ಕೆ ಏರಿಕೆಯಾಗಿದೆ. ಆಂಧ್ರಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 110ಕ್ಕೆ ಏರಿಕೆಯಾಗಿದ್ದು, ನಿನ್ನೆ ಒಂದೇ ದಿನ 9 ಹೊಸ ಕೇಸ್​ಗಳು ವರದಿಯಾಗಿವೆ. ಈವರೆಗೆ ಮೂರು ಜನ ಸಾವನ್ನಪ್ಪಿದ್ದಾರೆ. ಉಳಿದಂತೆ ಇಂದು ರಾಜ್ಯದಲ್ಲಿ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ ಎಂದು ಕರ್ನಾಟಕ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Comments are closed.