ರಾಷ್ಟ್ರೀಯ

ಲಾಕ್ ಡೌನ್ ಹಿನ್ನಲೆ: ಹಲವು ಬ್ಯಾಂಕ್ ಶಾಖೆಗಳು ಬಂದ್ ಸಾಧ್ಯತೆ?

Pinterest LinkedIn Tumblr


ನವದೆಹಲಿ: ಕೋವಿಡ್ 19 ವೈರಸ್ ಹಾವಳಿ ದೇಶವ್ಯಾಪಿಯಾಗುತ್ತಿರುವ ಈ ಸಂದರ್ಭದಲ್ಲಿ ಅದರ ಸಾಮುದಾಯಿಕ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರವು 21 ದಿನಗಳ ಕಾಲ ದೇಶವ್ಯಾಪಿ ಲಾಕ್ ಡೌನ್ ಘೋಷಿಸಿದೆ. ಆದರೆ ಬ್ಯಾಂಕ್ ಸಹಿತ ಕೆಲವೊಂದು ಸರಕಾರಿ ಕಛೇರಿಗಳನ್ನು ಗ್ರಾಹಕರ ಸೇವೆಗಾಗಿ ತೆರೆದಿಟ್ಟಿದೆ.

ಆದರೆ ಇದೀಗ ತನ್ನ ಸಿಬ್ಬಂದಿಗಳ ಆರೋಗ್ಯದ ದೃಷ್ಟಿಯಿಂದ ಮತ್ತು ಯಾವುದಾದರೂ ಮಾಧ್ಯಮದ ಮೂಲಕ ಬ್ಯಾಂಕ್ ಸಿಬ್ಬಂದಿಗಳಿಗೂ ಈ ಮಾರಣಾಂತಿಕ ಸೋಂಕು ಹರಡುವ ಸಾಧ್ಯತೆಗಳಿರುವುದರಿಂದ ಸೆಂಟ್ರಲ್ ಬ್ಯಾಂಕ್ ಮತ್ತು ಹಲವು ಪ್ರಮುಖ ಬ್ಯಾಂಕ್ ಗಳು ದೇಶಾದ್ಯಂತ ಇರುವ ತಮ್ಮ ಬ್ಯಾಂಕ್ ಗಳ ಕೆಲವೊಂದ ಶಾಖೆಗಳನ್ನು ಮುಚ್ಚಲು ಯೋಚಿಸುತ್ತಿವೆ ಎಂಬ ಮಾಹಿತಿಯನ್ನು ನಂಬಲರ್ಹ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದೇಶದಲ್ಲಿ ಹೆಚ್ಚಿನ ಆರ್ಥಿಕ ಚಟುವಟಿಕೆಗಳು ಇದೀಗ ಆನ್ ಲೈನ್ ಹಾಗೂ ಕ್ಯಾಶ್ ಲೆಸ್ ಮಾದರಿಯಲ್ಲಿ ನಡೆಯುತ್ತಿದ್ದರೂ, ಕೆಲವೊಂದು ಪ್ರಮುಖ ವ್ಯವಹಾರಗಳು ನೇರವಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕವೇ ನಡೆಯುತ್ತಿದೆ. ಹಾಗಾಗಿ ರಾಷ್ಟ್ರ ವ್ಯಾಪಿ ಲಾಕ್ ಡೌನ್ ಸಂದರ್ಭದಲ್ಲಿ ಬ್ಯಾಂಕ್ ವ್ಯವಹಾರವನ್ನು ಅಗತ್ಯ ಸೇವೆಗಳ ಪಟ್ಟಿಗೆ ಸೇರಿಸಲಾಗಿತ್ತು.

ಇದೀಗ ಮೂಲಗಳಿಂದ ತಿಳಿದುಬಂದಿರುವ ಪ್ರಕಾರ ಪ್ರಮುಖ ನಗರಗಳಲ್ಲಿ ಪ್ರತೀ 5 ಕಿಲೋಮೀಟರ್ ಗಳಿಗೆ ಒಂದು ಬ್ಯಾಂಕನ್ನು ಮಾತ್ರವೇ ಗ್ರಾಹಕ ವ್ಯವಹಾರಕ್ಕೆ ತೆರೆದಿಡುವ ಪ್ರಸ್ತಾಪವಿದೆ. ಆದರೆ ಈ ನಿರ್ಧಾರ ಯಾವ ದಿನಾಂಕದಿಂದ ಜಾರಿಯಾಗಲಿದೆ ಎಂಬ ಮಾಹಿತಿ ಮಾತ್ರ ಲಭ್ಯವಾಗಿಲ್ಲ.

ಇನ್ನು ಡಿಜಿಟಲ್ ವ್ಯವಹಾರದ ಅವಕಾಶಗಳು ಕಡಿಮೆಯಾಗಿರುವ ಗ್ರಾಮೀಣ ಭಾಗಗಳಲ್ಲಿ ಬ್ಯಾಂಕ್ ವ್ಯವಹಾರಗಳನ್ನು ಯಥಾಸ್ಥಿತಿಯಲ್ಲಿರಿಸಿ ನಗರ ಪ್ರದೇಶದಲ್ಲಿ ಇದಕ್ಕೆ ಮಿತಿ ಹೇರುವ ಕುರಿತಾಗಿಯೂ ಯೋಚಿಸಲಾಗುತ್ತಿದೆ ಹಾಗೂ ಸರಕಾರ ನೇರವಾಗಿ ಬಡವರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಿರುವ ಕಾರಣದಿಂದ ಮುಂಬರುವ ದಿನಗಳಲ್ಲಿ ಬ್ಯಾಂಕ್ ಶಾಖೆಗಳಲ್ಲಿ ಜನದಟ್ಟಣೆ ಉಂಟಾಗುವ ಸಾಧ್ಯತೆಗಳಿರುವ ಕಾರಣದಿಂದ ದೇಶದ ಪ್ರಮುಖ ಬ್ಯಾಂಕ್ ಗಳು ಈ ವಿಚಾರದಲ್ಲಿ ಪರಸ್ಪರ ಸಹಕರಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿವೆ ಎಂಬ ಮಾಹಿತಿಯನ್ನು ರಾಷ್ಟ್ರೀಕೃತ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ರಾಯಿಟರ್ಸ್ ಸುದ್ದಿಸಂಸ್ಥೆಗೆ ಹೇಳಿರುವುದಾಗಿ ತಿಳಿದುಬಂದಿದೆ.

Comments are closed.