ಲಕ್ನೋ: ಮನೆ ಮುಂದೆ ವಾಸಿಸುತ್ತಿದ್ದ ಯುವಕನನ್ನೇ ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿಯ ಪೋಷಕರು ಆಕೆಗೆ ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ.
ಕಳೆದ ಎರಡು ವರ್ಷದಿಂದ ಪ್ರೇಮಿಗಳು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ತಿಳಿದ ಯುವತಿಯ ಪೋಷಕರು ಪ್ರೀತಿಯನ್ನು ನಿರಾಕರಿಸಿದ್ದರು. ಹಾಗಾಗಿ ಇಬ್ಬರು ಓಡಿ ಹೋಗಿದ್ದರು. ಆಗ ಯುವತಿಯ ತಂದೆ, ನನ್ನ ಮಗಳು ಅಪ್ರಾಪ್ತಳಾಗಿದ್ದು, ಯುವಕನೊಬ್ಬ ಆಕೆಯ ತಲೆ ಕೆಡಿಸಿ ಕರೆದುಕೊಂಡು ಹೋಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಬಂಧಿಸಿ, ಯುವತಿಯನ್ನು ನಾರಿನಿಕೇತನ್‍ಗೆ ಕಳುಹಿಸಿದ್ದರು. ಬಳಿಕ ಇಬ್ಬರು 2019ರಲ್ಲಿ ಮದುವೆಯಾದರು.
ಯುವತಿ ಗ್ರಾಮದಲ್ಲಿರುವ ಯುವಕನ ಮನೆಯಲ್ಲಿಯೇ ವಾಸಿಸುತ್ತಿದ್ದಳು. ತನ್ನ ಮಗಳಿಂದ ಮರ್ಯಾದೆ ಹಾಳಾಯಿತು ಎಂದು ಪೋಷಕರು ಆಕೆಯನ್ನು ವಿರೋಧಿಸುತ್ತಿದ್ದರು. ಅಲ್ಲದೆ ಗ್ರಾಮವನ್ನು ಬಿಟ್ಟು ಹೋಗುವಂತೆ ಕಿರುಕುಳ ನೀಡುತ್ತಿದ್ದರು. ಈ ವಿಚಾರವಾಗಿ ಯುವಕ ಹಾಗೂ ಯುವತಿಯ ಪೋಷಕರ ನಡುವೆ ಜಗಳವಾಗಿದೆ. ಈ ಸಂದರ್ಭದಲ್ಲಿ ಯುವತಿಯ ಪೋಷಕರು ತಮ್ಮ ಮಗಳನ್ನು ಮನೆಗೆ ಕರೆದುಕೊಂಡು ಬಂದು ಹಲ್ಲೆ ನಡೆಸಿ, ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ.
ವಿಷ ಸೇವಿಸಿದ್ದರಿಂದ ಯುವತಿಯ ಆರೋಗ್ಯದ ಸ್ಥಿತಿ ಹದಗೆಟ್ಟಿತ್ತು. ಇದನ್ನು ನೋಡಿದ ಯುವಕ ತನ್ನ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ವೈದ್ಯರು ಯುವತಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದರು. ಈ ಘಟನೆ ನಡೆದ ನಂತರ ಯುವತಿಯ ಪೋಷಕರು ಪೊಲೀಸ್ ಠಾಣೆಗೆ ಹೋಗಿ, ನನ್ನ ಮಗಳನ್ನು ಆಕೆಯ ಪತಿ ಹಾಗೂ ಕುಟುಂಬಸ್ಥರು ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಸುಳ್ಳು ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ಯುವತಿಯ ಹೇಳಿಕೆ ಪಡೆದು ಆಕೆಯ ಕುಟುಂಬಸ್ಥರನ್ನು ಬಂಧಿಸಿದ್ದಾರೆ.
Comments are closed.