ನವದೆಹಲಿ: ಸೋಶಿಯಲ್ ಮೀಡಿಯಾ, ಡೇಟಿಂಗ್ ಸೈಟ್ ಅಥವಾ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಅಪರಿಚಿತರನ್ನು ಭೇಟಿಯಾಗುವ ಮುನ್ನ ಹುಷಾರಾಗಿರಿ. ಯಾಕೆಂದರೆ ಮದುವೆಗೆ ವರನನ್ನು ಹುಡುಕುವಾಗ 27 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಈ ಘಟನೆ ದಕ್ಷಿಣ ದೆಹಲಿಯ ಡಿಫೆನ್ಸ್ ಕಾಲೋನಿಯ ಗೆಸ್ಟ್ ಹೌಸ್ (ಅತಿಥಿ ಗೃಹ)ವೊಂದರಲ್ಲಿ ನಡೆದಿದೆ. ಆರೋಪಿಯನ್ನು 30 ವರ್ಷದ ಷಾ ಖವಾರ್ ಅಲಿ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಸಂತ್ರಸ್ತೆ ಮದುವೆಯಾಗಲು ಮ್ಯಾಟ್ರಿಮೋನಿ ಸೈಟ್‍ನಲ್ಲಿ ತನ್ನ ವಿವರಗಳನ್ನು ನೋಂದಾಯಿಸಿ ವರನನ್ನು ಹುಡುಕುತ್ತಿದ್ದಳು. ಇದೇ ವೇಳೆ ಆರೋಪಿ ಷಾ ಖವಾರ್ ಅಲಿ ಮ್ಯಾಟ್ರಿಮೋನಿ ಸೈಟ್ ಮೂಲಕ ಪರಿಚಯನಾಗಿದ್ದಾನೆ. ನಂತರ ಇಬ್ಬರು ಪರಸ್ಪರ ಚಾಟಿಂಗ್ ಮಾಡಲು ಶುರು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ದಿನ ಆರೋಪಿ ದೆಹಲಿಯ ಜಸೋಲಾ ಪ್ರದೇಶದಲ್ಲಿ ತನ್ನನ್ನು ಭೇಟಿಯಾಗಲು ಬರುವಂತೆ ಸಂತ್ರಸ್ತೆಯ ಬಳಿ ಕೇಳಿಕೊಂಡಿದ್ದಾನೆ. ಸಂತ್ರಸ್ತೆ ಕೂಡ ಇದಕ್ಕೆ ಒಪ್ಪಿದ್ದಾಳೆ. ಆದರೆ ಆರೋಪಿ ನಂತರ ದೆಹಲಿ ಡಿಫೆನ್ಸ್ ಕಾಲೋನಿಯಲ್ಲಿರುವ ಗೆಸ್ಟ್‌ಹೌಸ್‌ಗೆ ಬರುವಂತೆ ಮನವೊಲಿಸಿದ್ದಾನೆ. ಆತನನ್ನು ನಂಬಿ ಸಂತ್ರಸ್ತೆ ಅಲ್ಲಿಗೆ ಹೋಗಿದ್ದಾಳೆ. ಗೆಸ್ಟ್ ಹೌಸ್‍ನಲ್ಲಿ ಇಬ್ಬರು ರಾತ್ರಿ ಅಲ್ಲೆ ತಂಗಿದ್ದರು. ಈ ವೇಳೆ ಇಬ್ಬರೂ ದೈಹಿಕ ಸಂಪರ್ಕ ಹೊಂದಿದ್ದಾರೆ ಎಂದು ವರಿದಿಯಾಗಿದೆ.
ಆರೋಪಿ ಅಲಿ ನನ್ನನ್ನು ಭೇಟಿಯಾದ ನಂತರ ದೂರ ಮಾಡಲು ಪ್ರಾರಂಭಿಸಿದ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಇದೀಗ ಆತನ ವಿರುದ್ಧ ಸಂತ್ರಸ್ತೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಿದ್ದಾಳೆ. ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಆರೋಪಿ ಅಲಿ ನೋಯ್ಡಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.
Comments are closed.