ರಾಷ್ಟ್ರೀಯ

ಒಂದೇ ಮನೆಯ 6 ಮಂದಿ ರಕ್ತದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಾಣು

Pinterest LinkedIn Tumblr


ಹೊಸದಿಲ್ಲಿ: ಕೊರೊನಾ ವೈರಾಣು ದೇಶಕ್ಕೆ ಕಾಲಿಟ್ಟ ಬೆನ್ನಿಗೇ ಕಟ್ಟೆಚ್ಚರ ವಹಿಸಿರುವ ಕೇಂದ್ರ ಸರಕಾರ ಹೊಸದಾಗಿ ಸೋಂಕು ತಗುಲಿದ 22 ಮಂದಿಯನ್ನು ಬುಧವಾರ ಪತ್ತೆ ಮಾಡಿ ಆಸ್ಪತ್ರೆಗೆ ದಾಖಲಿಸಿದೆ. ಈ ಮೂಲಕ ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 28 ಮುಟ್ಟಿದೆ. ಆ ಪೈಕಿ ಕಳೆದ ತಿಂಗಳು ಅಸ್ವಸ್ಥರಾಗಿದ್ದ ಕೇರಳದ ಮೂರು ಮಂದಿ ಮಾತ್ರ ಚೇತರಿಕೆ ಕಂಡಿದ್ದಾರೆ ಎಂದು ಕೇಂದ್ರ ಸಚಿವ ಡಾ. ಹರ್ಷವರ್ಧನ್‌ ಸುದ್ದಿಗೋಷ್ಠಿಯಲ್ಲಿತಿಳಿಸಿದ್ದಾರೆ.

ಆರೋಗ್ಯ ಸಚಿವಾಲಯದ ಇಂಟಿಗ್ರೇಟೆಡ್‌ ಡಿಸೀಸ್‌ ಸರ್ವಿಲೆನ್ಸ್‌ ಪ್ರೊಗ್ರಾಮ್‌ (ಐಡಿಸಿಪಿ) ಅಡಿಯಲ್ಲಿ ದೇಶಾದ್ಯಂತ 66 ಮಂದಿ ಸೋಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಆ ಪೈಕಿ 22 ಮಂದಿಗೆ ಸೋಂಕಿರುವುದು ದೃಢಪಟ್ಟಿದೆ. ಆಗ್ರಾದ ಒಂದೇ ಕುಟುಂಬದ 6 ಮಂದಿ ರಕ್ತದಲ್ಲಿ ಕೊರೊನಾ ವೈರಾಣು ಪ್ರಮಾಣ ಹೆಚ್ಚಿದೆ ಎಂದು ರಕ್ತದ ಮಾದರಿ ಪರೀಕ್ಷಿಸಿದ ಪುಣೆಯ ರಾಷ್ಟ್ರೀಯ ವೈರಾಣು ಅಧ್ಯಯನ ಮತ್ತು ಸಂಶೋಧನೆ ಕೇಂದ್ರ ಹೇಳಿದೆ ಎಂದಿದ್ದಾರೆ.

ಸದ್ಯ ಆರು ಮಂದಿ ಸೋಂಕಿತರು ದಿಲ್ಲಿಸಫ್ದರ್‌ಜಂಗ್‌ ಆಸ್ಪತ್ರೆಯ ಪ್ರತ್ಯೇಕ ನಿಗಾ ಘಟಕದಲ್ಲಿದ್ದಾರೆ. ಇನ್ನು ನಾಲ್ಕು ಮಂದಿ ಶಂಕಿತ ಸೋಂಕಿತರನ್ನು ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಜರಾತಿನಲ್ಲಿ ಕಳೆದ ಒಂದು ತಿಂಗಳಲ್ಲಿವಿದೇಶಗಳಿಂದ ಮರಳಿದ 1,582 ಮಂದಿಯನ್ನು ರಕ್ತ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರೂ ಕೊರೊನಾ ಸೋಂಕು ಮುಕ್ತರಿದ್ದಾರೆ ಎಂದು ಆರೋಗ್ಯ ಇಲಾಖೆ ಸ್ಥಳೀಯ ಅಧಿಕಾರಿಗಳು ಹೇಳಿದೆ.

ಇರಾನ್‌ನಲ್ಲಿ ಸ್ಕ್ರೀನಿಂಗ್‌ ಕೇಂದ್ರ: ಸದ್ಯ ಚೀನಾದ ಹೊರತಾಗಿ ಮಧ್ಯಪ್ರಾಚ್ಯದಲ್ಲಿ ಅತಿಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿರುವುದು ಇರಾನ್‌ನಲ್ಲಿ. ಹಾಗಾಗಿ ಭಾರತಕ್ಕೆ ಇರಾನ್‌ ಮೂಲಕ ಹೆಚ್ಚು ಸೋಂಕಿತರು ಪ್ರವೇಶಿಸುವ ಆತಂಕದ ಮೇರೆಗೆ ಅಲ್ಲಿಯೇ ಒಂದು ಸ್ಕ್ರೀನಿಂಗ್‌ ಕೇಂದ್ರ ಸ್ಥಾಪನೆಗೆ ಸರಕಾರ ಸಿದ್ಧತೆ ನಡೆಸಿದೆ. ಈಗಾಗಲೇ ಒಬ್ಬ ತಜ್ಞ ವೈದ್ಯರು ಇರಾನ್‌ಗೆ ತೆರಳಿದ್ದಾರೆ. ಇನ್ನೂ ಮೂವರು ವೈದ್ಯರು, ತಪಾಸಣಾ ಸಾಧನಗಳನ್ನು ಕಳುಹಿಸುತ್ತೇವೆ ಎಂದು ಹರ್ಷವರ್ಧನ್‌ ಹೇಳಿದ್ದಾರೆ.

ತೆಲಂಗಾಣದಲ್ಲಿ ಮತ್ತಿಬ್ಬರಿಗೆ ಸೋಂಕಿನ ಶಂಕೆ: ದುಬೈನಿಂದ ಮರಳಿದ್ದ ಟೆಕ್ಕಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ತೆಲಂಗಾಣದ ಗಾಂಧಿ ಆಸ್ಪತ್ರೆಗೆ ದಾಖಲಾಗಿರುವ ಇಬ್ಬರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಹಾಗಾಗಿ ಅವರ ರಕ್ತದ ಮಾದರಿಗಳನ್ನು ಪುಣೆಯ ಎನ್‌ಐವಿಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಗುರುವಾರ ಪರೀಕ್ಷೆ ವರದಿ ಸಿಗಲಿದೆ ಎಂದು ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೊರೊನಾ ಪೀಡಿತ 24 ವರ್ಷದ ಟೆಕ್ಕಿ ಆರೋಗ್ಯ ಸ್ಥಿರವಾಗಿದೆ ಎಂದು ಕೂಡ ಅವರು ಹೇಳಿದ್ದಾರೆ.

Comments are closed.