ರಾಷ್ಟ್ರೀಯ

ಸಗಣಿ, ಗೋಮೂತ್ರದಿಂದ ಕೊರೊನಾ ವೈರಸ್‌ ಗುಣಪಡಿಸಬಹುದು: ಬಿಜೆಪಿ ಶಾಸಕಿ

Pinterest LinkedIn Tumblr


ಅಸ್ಸಾಂ: ಇಡೀ ವಿಶ್ವಕ್ಕೆ ವಿಶ್ವವೇ ಕೊರೊನಾ ವೈರಸ್‌ನ ರುದ್ರನರ್ತನಕ್ಕೆ ತಲ್ಲಣಗೊಂಡಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಮಾರಣಾಂತಿಕ ವೈರಸ್‌ಗೆ ವಿಜ್ಞಾನಿಗಳು ಔಷಧಿ ಕಂಡುಹಿಡಿಯಲು ಹಗಲು ರಾತ್ರಿ ಕಷ್ಟಪಡುತ್ತಿದ್ದಾರೆ. ಆದರೆ, ಬಿಜೆಪಿ ಶಾಸಕಿಯೊಬ್ಬರು ಕೇವಲ ಹಸುವಿನ ಸಗಣಿ ಮತ್ತು ಮೂತ್ರದಿಂದ ಕೊರೊನಾ ವೈರಸ್‌ ಗುಣಪಡಿಸಬಹುದು ಎಂದು ಹೇಳಿ ಸುದ್ದಿಯಲ್ಲಿದ್ದಾರೆ.

ಹೌದು, ಅಸ್ಸಾಂ ವಿಧಾನಸಭೆಯ ಬಜೆಟ್‌ ಅಧಿವೇಶನದಲ್ಲಿ ಮಾತನಾಡಿದ ಬಿಜೆಪಿ ಶಾಸಕಿ ಸುಮನ್‌ ಹರಿಪ್ರಿಯಾ, ಹಸುವಿನ ಸಗಣಿ ಮತ್ತು ಮೂತ್ರದಿಂದ ಮಾರಣಾಂತಿಕ ಕೊರೊನಾ ವೈರಸ್‌ನ್ನು ಗುಣಪಡಿಸಬಹುದು ಎಂದು ಹೇಳಿದರು. ಹಸುವಿನ ಸಗಣಿ ಮತ್ತು ಮೂತ್ರ ಕ್ಯಾನ್ಸರ್‌ ರೋಗಿಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ ಎಂದು ತಮ್ಮ ಮಾತಿನಲ್ಲಿ ಸೇರಿಸಿದರು.

ಹಸುವಿನ ಸಗಣಿ ಮತ್ತು ಮೂತ್ರದಿಂದ ಕ್ಯಾನ್ಸರ್‌ ಗುಣಪಡಿಸಿದ್ದಕ್ಕೆ ಸಾಕ್ಷಿಗಳು ಸಿಕ್ಕಿವೆ. ಇದಲ್ಲದೇ ಗುಜರಾತ್‌ನ ಆಯುರ್ವೇದಿಕ್‌ ಆಸ್ಪತ್ರೆ ಕೂಡ ಕ್ಯಾನ್ಸರ್‌ ರೋಗಕ್ಕೆ ಹಸುವಿನ ಸಗಣಿ ಮತ್ತು ಮೂತ್ರವನ್ನು ಔಷಧಿಯಾಗಿ ಬಳಸುತ್ತಿದೆ. ರೋಗಿಗಳಿಗೆ ಅವರು ಹಸುವಿನ ಸಗಣಿ ಮತ್ತು ಮೂತ್ರದಿಂದ ತಯಾರಿಸಿದ ಪಂಚಾಮೃತ ನೀಡುತ್ತಿದ್ದಾರೆ ಎಂದು ಸುಮನ್‌ ಹರಿಪ್ರಿಯಾ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಇಷ್ಟೆಲ್ಲಾ ಕಾರಣಗಳಿಂದ ಅದೇ ಮಾದರಿಯನ್ನು ಅನುಸರಿಸಿದರೆ ಕೊರೊನಾ ವೈರಸ್‌ ಗುಣಪಡಿಸಬಹುದು ಎಂದು ಶಾಸಕಿ ಹರಿಪ್ರಿಯಾ ಹೇಳಿದ್ದಾರೆ. ಇದಕ್ಕೂ ಮುನ್ನ, ಹಿಂದೂ ಮಹಾಸಭಾ ಕೂಡ ಹಸುವಿನ ಸಗಣಿ ಮತ್ತು ಮೂತ್ರದಿಂದ ಕೊರೊನಾ ವೈರಸ್‌ ಗುಣಪಡಿಸಬಹುದೆಂದು ಹೇಳಿತ್ತು.

ಹಸುವಿನ ಸಗಣಿ ಮತ್ತು ಮೂತ್ರವನ್ನು ಬಳಸುವುದರಿಂದ ಕೊರೊನಾ ವೈರಸ್‌ ಪ್ರಭಾವದಿಂದ ಮುಕ್ತವಾಗಬಹುದು. ಅದಲ್ಲದೇ ಓಂ ನಮಃ ಶಿವಾಯ ಮಂತ್ರ ಪಠಿಸುತ್ತಾ ಹಸುವಿನ ಸಗಣಿಯನ್ನು ದೇಹಕ್ಕೆ ಲೇಪಿಸಿದರೆ ರೋಗಿ ಬದುಕುತ್ತಾನೆ. ಕೊರೊನಾ ವೈರಸ್‌ ನಾಶಪಡಿಸಲು ವಿಶೇಷ ಯಜ್ಞವನ್ನು ಶೀಘ್ರದಲ್ಲಿಯೇ ನಡೆಸುತ್ತೇವೆ ಎಂದು ಹಿಂದೂ ಮಹಾಸಭಾದ ಅಧ್ಯಕ್ಷ ಚಕ್ರಪಾಣಿ ಮಹಾರಾಜ್‌ ಹೇಳಿ ಸುದ್ದಿಯಾಗಿದ್ದರು.

ಚೀನಾದಲ್ಲಿ ಕಂಡುಬಂದ ಹೊಸ ವೈರಸ್‌ ಇದುವರೆಗೂ 89 ಸಾವಿರಕ್ಕೂ ಹೆಚ್ಚು ಜನರಲ್ಲಿ ಕಂಡು ಬಂದಿದ್ದು, ವಿಶ್ವದಾದ್ಯಂತ 3 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಇಂದು ಭಾರತದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಕಂಡುಬಂದಿದ್ದು, ದೆಹಲಿ ಹಾಗೂ ತೆಲಂಗಾಣದಲ್ಲಿ ತಲಾ ಒಂದು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

Comments are closed.