ರಾಷ್ಟ್ರೀಯ

ಯುವತಿ ಸ್ನಾನ ಮಾಡುವ ವಿಡಿಯೋ ತೋರಿಸಿ ಅನೇಕ ಬಾರಿ ಅತ್ಯಾಚಾರ

Pinterest LinkedIn Tumblr


ಹೈದರಾಬಾದ್: ಯುವತಿ ಸ್ನಾನ ಮಾಡುವ ವಿಡಿಯೋವನ್ನು ತೋರಿಸಿ ಬ್ಲಾಕ್‍ಮೇಲ್ ಮಾಡಿ ಅನೇಕ ಬಾರಿ ಅತ್ಯಾಚಾರ ಎಸಗಿರುವ ಘಟನೆ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿ ಲಂಕಾ ಚಿನ್ನಬಾಬು ಯುವತಿಯ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ. ತನ್ನ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿ, ಮದುವೆಯಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?
ಆರೋಪಿ ಮತ್ತು ಯುವತಿ ಒಂದೇ ಗ್ರಾಮದವರಾಗಿದ್ದು, ಒಂದು ದಿನ ಯುವತಿ ಸ್ನಾನ ಮಾಡುವಾಗ ಅದನ್ನು ತನ್ನ ಫೋನಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ನಂತರ ಆ ವಿಡಿಯೋವನ್ನು ಯುವತಿಗೆ ತೋರಿಸಿ ಬ್ಲಾಕ್‍ಮೇಲ್ ಮಾಡಿ ಅನೇಕ ಬಾರಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪರಿಣಾಮ ಯುವತಿ ಗರ್ಭಿಣಿಯಾಗಿದ್ದಾಳೆ.

ಗರ್ಭಿಣಿಯಾದ ನಂತರ ಯುವತಿ ಈ ವಿಷಯವನ್ನು ಪೋಷಕರಿಗೆ ತಿಳಿಸಿದ್ದಾಳೆ. ಪೋಷಕರು ಆರೋಪಿ ಚಿನ್ನಬಾಬು ಜೊತೆ ಮಾತನಾಡಿದ್ದಾರೆ. ಆದರೆ ಆರೋಪಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕೊನೆಗೆ ಯುವತಿ ಮತ್ತು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಮದುವೆಯಾಗುವುದಾಗಿ ರಾಜಿ ಮಾಡಿಕೊಂಡಿದ್ದಾನೆ.

ಆರೋಪಿಯ ಮಾತನ್ನು ನಂಬಿ ಯುವತಿ ದೂರನ್ನು ಪಾಪಸ್ ತೆಗೆದುಕೊಂಡಿದ್ದಾಳೆ. ಬಳಿಕ ಹಿರಿಯರ ಸಮ್ಮುಖದಲ್ಲಿ ಆರೋಪಿ ಚಿನ್ನಬಾಬು ಮತ್ತು ಯುವತಿಯ ಮದುವೆಯಾಗಿದೆ. ಆದರೆ ವಿವಾಹವಾದ ಕೆಲವು ದಿನಗಳ ನಂತರ ಯುವತಿ ಗರ್ಭಿಣಿಯಾಗಿರುವುದಕ್ಕೆ ನಾನು ಕಾರಣ ಅಲ್ಲ ಎಂದು ಹೇಳಿ ಮನೆಯಿಂದ ಹೊರ ಹಾಕಿದ್ದಾನೆ.

ನೊಂದು ಯುವತಿ ಮತ್ತೊಮ್ಮೆ ಮೋಸ ಹೋಗಿದ್ದನ್ನು ಮನಗಂಡು ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.