ಚೆನ್ನೈ: ಮಾತನಾಡಿಸುವುದನ್ನು ಬಿಟ್ಟಿದ್ದಾಳೆ ಎಂಬ ಕಾರಣಕ್ಕೆ ಖಾಸಗಿ ಬಸ್ಸಿನ ಕಂಡಕ್ಟರ್ ಓರ್ವ ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ.
ಘಟನೆಯಲ್ಲಿ ಗಾಯಗೊಂಡ ಸಂತ್ರಸ್ತೆಯನ್ನು 26 ವರ್ಷದ ಜೆ ಸಲೋಮಿ ಎಂದು ಗುರುತಿಸಲಾಗಿದೆ. ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದ ಸಲೋಮಿ ಮನೆಯಿಂದ ಕಚೇರಿಗೆ ಖಾಸಗಿ ಬಸ್ಸಿನಲ್ಲಿ ಓಡಾಡುತ್ತಿದ್ದರು. ಈ ವೇಳೆ ಸುಂದರಮೂರ್ತಿ ಇದೇ ಬಸ್ಸಿನ ಕಂಡಕ್ಟರ್ ಅಗಿ ಕೆಲಸ ಮಾಡುತ್ತಿದ್ದು, ಇಬ್ಬರು ಸ್ನೇಹಿತರಾಗಿದ್ದರು.
10 ವರ್ಷದ ಹಿಂದೆಯೇ ಮದುವೆಯಾಗಿದ್ದ ಸಲೋಮಿಗೆ ಎರಡು ಮಕ್ಕಳಿದ್ದಾರೆ. ಜೊತೆಗೆ ಆಕೆಯ ಪತ್ನಿ ಜಾನ್ ವಿಕ್ಟರ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಸ್ಸಿನಲ್ಲಿ ಪ್ರಯಾಣಮಾಡುವಾಗ ಸಲೋಮಿ ಅವರು ಸುಂದರಮೂರ್ತಿ ಜೊತೆ ಚೆನ್ನಾಗಿ ಮಾತನಾಡಿದ್ದಾರೆ. ಇದನ್ನೆ ತಪ್ಪು ತಿಳಿದುಕೊಂಡ ಕಂಡಕ್ಟರ್ ಸಲೋಮಿಗೆ ತೀರ ಹತ್ತಿರವಾಗಲು ಪ್ರಯತ್ನ ಮಾಡಿದ್ದಾನೆ. ಇದನ್ನು ತಿಳಿದ ಸಲೋಮಿ ಆತನನ್ನು ಮಾತನಾಡಿಸುವುದನ್ನು ಬಿಟ್ಟಿದ್ದಾರೆ.
ಈ ವೇಳೆ ಸಲೋಮಿ ಹಿಂದೆ ಬಿದ್ದಿದ್ದ ಕಂಡಕ್ಟರ್ ಮಾತನಾಡಿಸುವಂತೆ ಹಿಂಸೆ ಕೊಟ್ಟಿದ್ದಾನೆ. ಆದರೆ ಜೆ ಸಲೋಮಿ ಇದಕ್ಕೆ ಒಪ್ಪಿಲ್ಲ. ಇದರಿಂದ ಕೋಪಗೊಂಡ ಸುಂದರಮೂರ್ತಿ ಆಕೆಯನ್ನು ಹಿಂಬಾಲಿಸಿ ಬಂದು ಕಚೇರಿಯನ್ನು ತಿಳಿದುಕೊಂಡಿದ್ದಾನೆ. ನಂತರ ಕಚೇರಿಗೆ ಬಂದ ಸುಂದರಮೂರ್ತಿ ನನ್ನನ್ನು ಮಾತನಾಡಿಸು ಎಂದು ಮತ್ತೆ ಪೀಡಿಸಿದ್ದಾನೆ. ಇದಕ್ಕೆ ಒಪ್ಪದ ಸಲೋಮಿ ಮೇಲೆ ಕಚೇರಿಯಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಘಟನೆಯಲ್ಲಿ ಶೇ.20 ರಷ್ಟು ಸುಟ್ಟುಹೋಗಿದ್ದ ಸಲೋಮಿಯನ್ನು ಸ್ಥಳದಲ್ಲಿ ಇದ್ದ ಕೆಲವರು ಕಾಪಾಡಿ ಆಸ್ಪತ್ರೆಗೆ ಸೇರಿಸಿದ್ದಾರೆ. ಜೊತೆಗೆ ಸುಂದರಮೂರ್ತಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
Comments are closed.