ರಾಷ್ಟ್ರೀಯ

ಮುಟ್ಟಾದ ಮಹಿಳೆ ಅಡುಗೆ ಮಾಡಿದರೆ ಆಕೆ ಮುಂದಿನ ಜನ್ಮದಲ್ಲಿ ನಾಯಿ ಆಗಿ ಜನ್ಮತಾಳುತ್ತಾಳೆ: ಭಾರೀ ವಿವಾದಕ್ಕೆಡೆ ಮಾಡಿದ ಸ್ವಾಮೀಜಿ ಹೇಳಿಕೆ

Pinterest LinkedIn Tumblr

ಅಹಮದಾಬಾದ್: ಋತುಚಕ್ರದ ಸಮಯದಲ್ಲಿ ಮಹಿಳೆ ಯಾರನ್ನೂ ಮುಟ್ಟಬಾರದು. ಹಾಗೆ ಮುಟ್ಟಿದರೆ ಅಪವಿತ್ರ ಎನ್ನುವ ಮೂಢನಂಬಿಕೆ ಈ ಮೊದಲು ಚಾಲ್ತಿಯಲ್ಲಿತ್ತು. ಆದರೆ, ಈಗ ಜನರು ಶಿಕ್ಷಿತರಾಗುತ್ತಿದ್ದು ಈ ಮೌಢ್ಯ ನಾಶವಾಗುತ್ತಿದೆ. ಈ ಮಧ್ಯೆ, ಋತುಮತಿ ಅಡುಗೆ ಮಾಡಿದರೆ ಆಕೆ ಮುಂದಿನ ಜನ್ಮದಲ್ಲಿ ನಾಯಿ ಆಗಿ ಜನ್ಮತಾಳುತ್ತಾಳೆ ಎಂದು ಸ್ವಾಮೀಜಿಯೋರ್ವ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.

ಇಲ್ಲಿನ ಭುಜ್​ ನಗರದ ಸ್ವಾಮಿ ನಾರಾಯಣ್​​ ಮಂದಿರದ ಕೃಷ್ಣಸ್ವರೂಪ್​ ದಾಸ್​ ಜೀ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಋತುಮತಿಯರು ಮಾಡಿದ ಅಡುಗೆ ಊಟ ಮಾಡಿದರೆ ಮುಂದಿನ ಜನ್ಮದಲ್ಲಿ ನೀವು ಎತ್ತಾಗಿ ಹುಟ್ಟುತ್ತೀರಿ. ಮಹಿಳೆಯರು ಋತುಚಕ್ರದ ಅವಧಿಯಲ್ಲಿ ಗಂಡನಿಗೆ ಊಟ ಮಾಡಿ ಬಡಿಸಿದರೆ ಅಂಥವರು ಮುಂದಿನ ಜನ್ಮದಲ್ಲಿ ವೇಶ್ಯೆ ಅಥವಾ ಹೆಣ್ಣುನಾಯಿ ಆಗಿ ಜನ್ಮ ತಾಳುತ್ತಾರೆ,” ಎಂದು ಕೃಷ್ಣಸ್ವರೂಪ್​ ದಾಸ್​ ಹೇಳಿದ್ದಾರೆ.

ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕೃಷ್ಣಸ್ವರೂಪ್​, “ನಾನು ಹೇಳಿದ ಈ ಮಾತಿನ ಬಗ್ಗೆ ನಿಮಗೆ ಹೇಗನ್ನಿಸುತ್ತದೆಯೋ ಹಾಗೆ ಭಾವಿಸಿಕೊಳ್ಳಿ. ಆದರೆ, ಶಾಸ್ತ್ರದಲ್ಲಿ ಹೀಗೆಯೇ ಬರೆಯಲಾಗಿದೆ. ಅದನ್ನೇ ನಾನು ನಿಮಗೆ ಹೇಳಿದ್ದೇನೆ,” ಎಂದಿದ್ದಾರೆ.

ಕೃಷ್ಣಸ್ವರೂಪ್ ಹೇಳಿಕೆಗೆ ಟ್ವಿಟ್ಟರ್​ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಅನೇಕರು ಈ ಸ್ವಾಮೀಜಿಯನ್ನು ಪೀಠದಿಂದ ಕೆಳಗಿಳಿಸುವಂತೆ ಆಗ್ರಹಿಸಿದ್ದಾರೆ. ಮತ್ತೂ ಕೆಲವರು, ಸಮಾಜಕ್ಕೆ ಒಳ್ಳೆಯದನ್ನು ಬೋಧೀಸುವವರೇ ಈ ರೀತಿ ಹೇಳಿದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಸ್ವಾಮಿ ನಾರಾಯಣ್​​ ಮಂದಿರ ನಡೆಸುತ್ತಿರುವ ಶಾಲೆಯಲ್ಲಿ ಋತುಮತಿಯರನ್ನು ಗುರುತಿಸಲು 60 ವಿದ್ಯಾರ್ಥಿನಿಯರ ಒಳ ಉಡುಪು ಕಳಚುವಂತೆ ಸೂಚಿಸಿದ್ದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರದಲ್ಲಿ ಎಫ್​ಐಆರ್​ ಕೂಡ ದಾಖಲಾಗಿತ್ತು. ಈ ಪ್ರಕರಣ ಚರ್ಚೆಯಲ್ಲಿರುವಾಗಲೇ ಈ ರೀತಿ ವಿವಾದಾತ್ಮಕ ಹೇಳಿಕೆ ಕೊಡಲಾಗಿದೆ.

Comments are closed.