ರಾಷ್ಟ್ರೀಯ

ಯುವತಿಯಿಂದ ಅತ್ಯಾಚಾರದ ಆರೋಪ: ದಂಪತಿ ಬಂಧನ

Pinterest LinkedIn Tumblr


ಕೋಲ್ಕತ್ತಾ: ಯುವತಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿದ ಒಂದು ವಾರದ ನಂತರ ಪತಿ ಮತ್ತು ಪತ್ನಿ ಇಬ್ಬರನ್ನೂ ಪೊಲೀಸರು ಬಂಧಿಸಿರುವ ಘಟನೆ ಕೋಲ್ಕತ್ತಾದ ಬಾಗಜಾಟಿನ್‍ನಲ್ಲಿ ನಡೆದಿದೆ.

ಆರೋಪಿ ತಮ್ಮ ಬಾಡಿಗೆ ಮನೆಯಲ್ಲಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಎಂಟು ದಿನಗಳ ಹಿಂದೆ ವ್ಯಕ್ತಿಯೊಬ್ಬ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಯುವತಿ ಪತುಲಿ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಳು.

ದೂರು ದಾಖಲಿಸಿದ ನಂತರ ಪೊಲೀಸರು ಆರೋಪಿಗಳ ನಿವಾಸಕ್ಕೆ ತೆರಳಿ ಅವರನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಆರೋಪಿ, ಪತ್ನಿ ಬೆಲೆಘಾಟಾದ ಬ್ಯಾಗ್ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಸಂತ್ರಸ್ತೆ ಮತ್ತು ಆರೋಪಿ ಪತಿ ನಡುವಿನ ಲೈಂಗಿಕ ಸಂಬಂಧ ಸಹಮತದಿಂದ ಕೂಡಿತ್ತು ಎಂದು ಆರೋಪಿಗಳಾಗಿರುವ ದಂಪತಿ ಪೊಲೀಸರ ಬಳಿ ಹೇಳಿದ್ದಾರೆ.

ಯುವತಿ ಮತ್ತು ಆರೋಪಿ ಪತ್ನಿ ದಕ್ಷಿಣ ಕೋಲ್ಕತ್ತಾದ ದೇವಾಲಯದ ಹೊರಗೆ ಇಬ್ಬರು ಮಾತನಾಡಿದ್ದರು. ಈ ವೇಳೆ ಒಬ್ಬರಿಗೊಬ್ಬರು ಪರಿಚಯವಾಗಿದೆ. ಆಗ ಯುವತಿ ನನಗೆ ಕೆಲಸವಿಲ್ಲ ಮತ್ತು ನಮ್ಮ ತಂದೆಯ ಆರೋಗ್ಯವೂ ಸರಿಯಲ್ಲ ಎಂದು ಆರೋಪಿ ಪತ್ನಿಯ ಜೊತೆ ಹೇಳಿಕೊಂಡಿದ್ದೆ. ನಂತರ ಆಕೆ ಕೆಲಸ ನೀಡುವ ನೆಪದಲ್ಲಿ ನನ್ನನ್ನು ಮನೆಗೆ ಕರೆದುಕೊಂಡು ಹೋಗಿದ್ದಳು. ಆದರೆ ಆಕೆಯ ಪತಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

ಫೆಬ್ರವರಿ 9 ರಂದು ಆರೋಪಿ ಯುವತಿಯ ಒಪ್ಪಿಗೆಯ ಮೇರೆಗೆ ಸೆಕ್ಸ್ ಮಾಡಿದ್ದನು. ಅವನ ಪತ್ನಿ ಗರ್ಭಧರಿಸಲಾಗದ ಕಾರಣ ಯುವತಿ ಜೊತೆ ಲೈಂಗಿಕ ಸಂಬಂಧ ಹೊಂದಿದ್ದನು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.

ಆರೋಪಿಗಳಿಗೆ ಮದುವೆಯಾಗಿ ಐದು ವರ್ಷಗಳಾಗಿದ್ದು, ಮಕ್ಕಳಿಲ್ಲ. ಮಹಿಳೆಗೆ ಎರಡು ಬಾರಿ ಗರ್ಭಪಾತವಾಗಿದೆ. ಆಗ ವೈದ್ಯರು ಮತ್ತೆ ಗರ್ಭಿಣಿಯಾಗದಂತೆ ಸಲಹೆ ನೀಡಿದ್ದರು. ಹೀಗಾಗಿ ಮಹಿಳೆ ಗರ್ಭಧರಿಸಲು ಸಾಧ್ಯವಾಗದ ಕಾರಣ ಸಂತ್ರಸ್ತೆಯನ್ನು ಸಂಪರ್ಕಿಸಿದ್ದಾಳೆ. ಗರ್ಭಧಾರಣೆ ಮತ್ತು ಮಗುವಿಗೆ ಬದಲಾಗಿ ಅವರು ತಮ್ಮ ಗ್ರಾಮದಲ್ಲಿ ಸಂತ್ರಸ್ತೆಗೆ ದೈನಂದಿನ ಆಹಾರ, ಹಣ ಮತ್ತು ಭೂಮಿಯನ್ನು ನೀಡಿದ್ದರು ಎಂದು ಆರೋಪಿಗಳು ಹೇಳಿದ್ದಾರೆ. ಹೀಗಾಗಿ ನಾವು ಅವರ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

Comments are closed.