ರಾಷ್ಟ್ರೀಯ

ಅನೈತಿಕ ಸಂಬಂಧಕ್ಕೆ ಅಡ್ಡಿ: ಪೊಲೀಸ್ ಪೇದೆಯಿಂದ ಹೆಂಡತಿಗೆ ಜುಟ್ಟು ಹಿಡಿದು ಥಳಿತ

Pinterest LinkedIn Tumblr


ಭೋಪಾಲ್: ತನ್ನ ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ ಪತ್ನಿಯನ್ನು ಪೊಲೀಸ್ ಪೇದೆಯೋರ್ವ ಸಾರ್ವಜನಿಕವಾಗಿ ಥಳಿಸಿರುವ ಘಟನೆ ಮಧ್ಯ ಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಉಸ್ತುವಾರಿಯಾಗಿರುವ ಪೊಲೀಸ್ ಪೇದೆ ನರೇಂದ್ರ ಸೂರ್ಯವಂಶಿ, ತನ್ನ ಹೆಂಡತಿಯನ್ನು ಸಾರ್ವಜನಿಕವಾಗಿ ಜುಟ್ಟು ಹಿಡಿದು ಎಳೆದುತಂದು ಥಳಿಸಿದ್ದಾನೆ. ಈ ಘಟನೆಯನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಪೇದೆ ಸೂರ್ಯವಂಶಿ ತನ್ನ ಮಡದಿಯನ್ನು ಎಳೆದುತಂದು, ಸಾರ್ವಜನಿಕವಾಗಿ ಥಳಿಸಿದ್ದಾನೆ. ಜೊತೆಗೆ ಆಕೆಯನ್ನು ನೆಲೆದ ಮೇಲೆ ಹಾಕಿ ತುಳಿದು ತನ್ನ ಚಪ್ಪಲಿಯಿಂದ ಹೊಡೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಅಲ್ಲಿ ಸಾರ್ವಜನಿಕರೂ ಇದ್ದು, ಅವರು ದಂಪತಿಯ ಜಗಳವನ್ನು ಬಿಡಿಸಲು ಮುಂದಾಗಿದ್ದಾರೆ. ಮಂಗಳವಾರ ನಡೆದಿರುವ ಈ ಘಟನಾ ಸ್ಥಳದಲ್ಲಿ ಸಮವಸ್ತ್ರ ಧರಿಸಿದ ಪೊಲೀಸರು ಇರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವರದಿಯ ಪ್ರಕಾರ ಸೂರ್ಯವಂಶಿ ಬೇರೆ ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟಿಕೊಂಡಿದ್ದು, ಇದನ್ನು ವಿರೋಧಿಸಿದ ತನ್ನ ಹೆಂಡತಿಗೆ ಹೀಗೆ ಥಳಿಸಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಸೂರ್ಯವಂಶಿ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Comments are closed.