ರಾಷ್ಟ್ರೀಯ

ಪ್ರೀತಿಸಿ ವಿವಾಹವಾಗಿ ಮಗುವಿದ್ದರೂ 18ರ ಯುವತಿಯೊಂದಿಗೆ ಲವ್ವಿಡವ್ವಿ

Pinterest LinkedIn Tumblr


ಚೆನ್ನೈ: ಮದುವೆಯಾಗಿ ಮಗುವಿದ್ದರೂ 18ರ ಹುಡುಗಿಯನ್ನು ಪ್ರೀತಿಸಿದ. ಇದೀಗ ಪ್ರೇಮಿಗಳಿಬ್ಬರು ಕಾರಿನೊಳಗೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಅಣ್ಣಾನಗರದಲ್ಲಿ ನಡೆದಿದೆ.

ರಮೇಶ್ (31) ಮತ್ತು ರೀನಾ (18) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಅಣ್ಣಾನಗರದ ಸಮೀಪದ ಕಾವೇರಿ ನದಿ ತೀರದ ಬಳಿ ಕಾರಿನೊಳಗೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಏನಿದು ಪ್ರಕರಣ?
ತಿರುಚ್ಚಿಯ ಪುತ್ತೂರು ನಿವಾಸಿಯಾದ ಮೃತ ರಮೇಶ್ ಕಾರು ಓಡಿಸುತ್ತ ಜೀವನ ರೂಪಿಸಿಕೊಂಡಿದ್ದನು. ಈತ ತೆನ್ನೂರ್ ಮೂಲದ ಕಾವ್ಯಾಳನ್ನು ಪ್ರೀತಿಸಿ ಕಳೆದ ವರ್ಷ ಮಾರ್ಚ್‍ನಲ್ಲಿ ಮದುವೆಯಾಗಿದ್ದನು. ಈ ದಂಪತಿಗೆ ಏಳು ತಿಂಗಳ ಮಗು ಕೂಡ ಇತ್ತು.

ಶುಕ್ರವಾರ ಅಣ್ಣಾನಗರದ ಸಮೀಪದ ಕಾವೇರಿ ನದಿ ತೀರಕ್ಕೆ ರಮೇಶ್ ಯುವತಿಯೊಂದಿಗೆ ಕಾರಿನಲ್ಲಿ ಹೋಗಿದ್ದ. ನಂತರ ಯುವತಿಯೊಂದಿಗೆ ತುಂಬಾ ಸಮಯ ಮಾತಾಡಿದ್ದ ರಮೇಶ್, ಆ ಬಳಿಕ ಇಬ್ಬರು ಕಾರಿನೊಳಗೆ ವಿಷ ಕುಡಿದ ಆತ್ಮಹತ್ಯೆ ಮಾಡಿಕೊಂಡಿದ್ದರು. ನದಿಯ ಬಳಿ ಸ್ನಾನ ಮಾಡುತ್ತಿದ್ದವರು ಇಬ್ಬರನ್ನು ನೋಡಿ ಸ್ಥಳೀಯ ಜಿಯಾಪುರಂ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಇಬ್ಬರು ಮೃತಪಟ್ಟಿದ್ದರು. ಹೀಗಾಗಿ ಮರಣೋತ್ತರ ಪರೀಕ್ಷೆಗಾಗಿ ಇಬ್ಬರ ಮೃತದೇಹವನ್ನು ತಿರುಚ್ಚಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ನಂತರ ಪೊಲೀಸರು ಕಾರನ್ನು ಪರಿಶೀಲಿಸಿದಾಗ ಎರಡು ಫೋನ್‍ಗಳು ಪತ್ತೆಯಾಗಿವೆ. ಬಳಿಕ ಕಾರ್ ಮತ್ತು ಫೋನ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತನಿಖೆ ವೇಳೆ ರಮೇಶ್‍ನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಯುವತಿ ತಿರುಚ್ಚಿಯ ತೆನ್ನೂರ್ ನ ಸಂಗೀತಪುರ ನಿವಾಸಿ ರೀನಾ (18) ಎಂದು ತಿಳಿದುಬಂದಿದೆ. ಮೃತ ರೀನಾ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿನ ಬಳಿ ಕೆಲಸದ ನಿಮಿತ್ತ ಪ್ರತಿ ದಿನ ರಮೇಶ್ ಬಂದು ಹೋಗುತ್ತಿದ್ದ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು ಎನ್ನಲಾಗಿದೆ.

ಇವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಇವರ ಅಕ್ರಮ ಸಂಬಂಧದ ಬಗ್ಗೆ ಕುಟುಂಬಕ್ಕೆ ತಿಳಿದಿರುವ ಕಾರಣ ಆತ್ಮಹತ್ಯೆ ಶರಣಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Comments are closed.