ರಾಷ್ಟ್ರೀಯ

ದೇಶಾದ್ಯಂತ ಎನ್​ಆರ್​ಸಿ ಜಾರಿ ಮಾಡುವ ಯೋಜನೆ ಸದ್ಯಕ್ಕೆ ಇಲ್ಲ: ಕೇಂದ್ರ ಸರ್ಕಾರ

Pinterest LinkedIn Tumblr

ನವದೆಹಲಿ: ದೇಶಾದ್ಯಂತ ಎನ್​ಆರ್​ಸಿ ಜಾರಿ ಮಾಡುವ ಯೋಜನೆ ಸದ್ಯಕ್ಕೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಇಂದು ಲೋಕಸಭೆಯಲ್ಲಿ ಈ ವಿಚಾರವನ್ನು ಖಚಿತಪಡಿಸಿದೆ. ಸಿಎಎ, ಎನ್​ಆರ್​ಸಿ ವಿರುದ್ಧ ದೇಶವ್ಯಾಪಿ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿರುವಂತೆಯೇ ಕೇಂದ್ರ ಸರ್ಕಾರ ಕಾದು ನೋಡುವ ತಂತ್ರ ಅನುಸರಿಸುತ್ತಿರುವಂತಿದೆ.

“ಭಾರತೀಯ ನಾಗರಿಕರ ರಾಷ್ಟ್ರೀಯ ನೊಂದಣಿ ಯೋಜನೆಯನ್ನು ರಾಷ್ಟ್ರ ಮಟ್ಟದಲ್ಲಿ ಜಾರಿಗೆ ಸಿದ್ಧತೆ ನಡೆಸಲು ಸರ್ಕಾರ ಈವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ” ಎಂದು ಕೇಂದ್ರ ಗೃಹ ಇಲಾಖೆ ಲೋಕಸಭೆಗೆ ಲಿಖಿತ ಉತ್ತರದ ಮೂಲಕ ಸ್ಪಷ್ಟನೆ ನೀಡಿದೆ.

ಸಿಎಎ ಮತ್ತು ಎನ್​ಆರ್​ಸಿ ವಿಚಾರದಲ್ಲಿ ದೇಶದ ವಿಪಕ್ಷಗಳು ಹಾಗೂ ಮುಸ್ಲಿಮ್ ಸಮುದಾಯದವರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಭಾರತದ ಯಾವುದೇ ನಾಗರಿಕನ ಪೌರತ್ವ ಕಿತ್ತುಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಪದೇ ಪದೇ ಸ್ಪಷ್ಟಪಡಿಸುತ್ತಲೇ ಇದೆ. ಆದರೂ ಕೂಡ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿದೆ.

ಎನ್​ಆರ್​ಸಿ ಜಾರಿ ವಿಚಾರದಲ್ಲಿ ಸರ್ಕಾರದಿಂದ ತದ್ವಿರುದ್ಧ ಹೇಳಿಕೆಗಳು ಬರುತ್ತಿವೆ. ಎನ್​ಆರ್​ಸಿ ಈಗ ಜಾರಿಯಾಗುವುದಿಲ್ಲ ಎಂದು ಪ್ರಧಾನಿ ಹೇಳಿದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಕೆಲ ರಾಜಕೀಯ ಭಾಷಣಗಳ ವೇಳೆ ಎನ್​ಆರ್​ಸಿ ದೇಶವ್ಯಾಪಿ ಜಾರಿಯಾಗುತ್ತದೆ ಎಂದು ಘಂಟಾಘೋಷವಾಗಿ ಸಾರಿದ್ದಾರೆ. ಸೆನ್ಸಸ್​ನ ಪೂರ್ವಬಾವಿಯಾಗಿ ರಾಷ್ಟ್ರೀಯ ಜನಸಂಖ್ಯಾ ಯೋಜನೆ (ಎನ್​ಪಿಆರ್) ಇದೆ. ಇದು ಈಗಾಗಲೇ ಚಾಲನೆಯಲ್ಲಿದೆ. ಎನ್​ಪಿಆರ್ ಎಂಬುದು ಎನ್​ಆರ್​ಸಿ ಯೋಜನೆಯ ಒಂದು ಭಾಗ ಎಂದೂ ವಿಪಕ್ಷಗಳು ವಿಶ್ಲೇಷಿಸುತ್ತಿವೆ. ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ಕೆಲ ರಾಜ್ಯಗಳು ಈಗಾಗಲೇ ಸಿಎಎ, ಎನ್​ಆರ್​ಸಿ ವಿರುದ್ಧ ನಿರ್ಣಯ ತೆಗೆದುಕೊಂಡಿವೆ.

ಅಸ್ಸಾಮ್ ರಾಜ್ಯದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಎನ್​ಆರ್​ಸಿ ಯೋಜನೆ ಚಾಲನೆಯಲ್ಲಿದೆ. ಅಕ್ರಮ ವಲಸಿಗರನ್ನು, ಅದರಲ್ಲೂ ಅಕ್ರಮ ಬಾಂಗ್ಲಾದೇಶೀ ವಲಸಿಗರನ್ನು ಗುರುತಿಸಲು ಅಲ್ಲಿ ಈ ಪ್ರಕ್ರಿಯೆ ಜಾರಿಯಾಗಿದೆ. ಅಲ್ಲಿ ನಾಗರಿಕರ ಅಂತಿಮ ಪಟ್ಟಿ ತಯಾರಾಗಿದೆ. ಲಕ್ಷಾಂತರ ಜನರನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ. ಪಟ್ಟಿಯಲ್ಲಿಲ್ಲದವರು ಪೌರತ್ವ ಸಾಬೀತುಪಡಿಸಲು ಅಲ್ಲಿ ಇನ್ನಷ್ಟು ಕಾಲಾವಕಾಶ ನೀಡಲಾಗಿದೆ.

ಅಸ್ಸಾಮ್ ರಾಜ್ಯದಲ್ಲಿ ಅಕ್ರಮ ವಲಸಿಗರ ಸಮಸ್ಯೆ ತೀವ್ರ ಮಟ್ಟದಲ್ಲಿದೆ. 1971ರ ನಂತರ ಇಲ್ಲಿ ಬಾಂಗ್ಲಾದೇಶದಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ವಲಸೆ ಬಂದಿದ್ದಾರೆನ್ನಲಾಗಿದೆ. ಈ ಅಕ್ರಮ ವಲಸಿಗರಿಂದಾಗಿ ಸ್ಥಳೀಯ ಅಸ್ಸಾಮಿಗರ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂಬ ಕೂಗು ಬಲವಾಗಿದೆ. ಅಲ್ಲಿಯ ಹಲವು ಸಂಘಟನೆಗಳು ದಶಕಗಳಿಂದ ಈ ಸಮಸ್ಯೆ ವಿರುದ್ಧ ಹೋರಾಟ ಮಾಡಿವೆ. ತತ್​ಪರಿಣಾಮವಾಗಿ ಸರ್ವೋಚ್ಚ ನ್ಯಾಯಾಲಯವು ಅಸ್ಸಾಮ್​ನಲ್ಲಿ ಅಕ್ರಮ ವಲಸಿಗರನ್ನು ಗುರುತಿಸಲು ಎನ್​ಆರ್​ಸಿ ಜಾರಿ ಮಾಡುವಂತೆ ದಿಗ್​ದರ್ಶನ ನೀಡಿತ್ತು.

ಅಸ್ಸಾಮ್​ನಂತೆ ದೇಶಾದ್ಯಂತವೂ ಅಕ್ರಮ ಬಾಂಗ್ಲಾದೇಶೀಯರು ಹರಡಿ ಹೋಗಿದ್ದಾರೆ. ಇವರಿಂದಾಗಿ ರಾಷ್ಟ್ರೀಯ ಭದ್ರತೆಗೆ ಅಪಾಯ ಇದೆ ಎಂಬ ಕೂಗು ಹಲವೆಡೆ ಪ್ರತಿಧ್ವನಿಸಿವೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಎನ್​ಆರ್​ಸಿ ಜಾರಿಯಾಗಬೇಕೆಂಬ ವಾದಗಳಿವೆ.

Comments are closed.