ರಾಷ್ಟ್ರೀಯ

ಗಂಡನ ಕುಡಿತಕ್ಕೆ ಬೇಸತ್ತು 4 ಜನ ಹೆಣ್ಣು ಮಕ್ಕಳಿಗೆ ವಿಷ ಹಾಕಿ ಆತ್ಮಹತ್ಯೆ

Pinterest LinkedIn Tumblr


ಲಕ್ನೋ: ಪತಿಯ ಕುಡಿತಕ್ಕೆ ಬೇಸತ್ತ ಪತ್ನಿ ತನ್ನ ನಾಲ್ವರು ಹೆಣ್ಣು ಮಕ್ಕಳಿಗೆ ವಿಷ ಹಾಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಫತೇಪುರದಲ್ಲಿ ನಡೆದಿದೆ.

ಶ್ಯಾಮಾ(40), ಪಿಂಕಿ (21), ಪ್ರಿಯಾಂಕ (14), ವರ್ಷ್ (13) ಹಾಗೂ ನನ್ಕಿ(10) ಮೃತಪಟ್ಟ ತಾಯಿ- ಮಕ್ಕಳು. ಹಲವು ದಿನಗಳಿಂದ ಶ್ಯಾಮಾ ಮನೆಯ ಬಾಗಿಲು ಲಾಕ್ ಆಗಿತ್ತು. ಶನಿವಾರ ಅಂದರೆ ಇಂದು ಬೆಳಗ್ಗೆ ಮನೆಯಿಂದ ದುರ್ವಾಸನೆ ಬರಲು ಶುರುವಾದಾಗ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದರು. ಪೊಲೀಸರು ಬಾಗಿಲನ್ನು ಒಡೆದು ಒಳಗೆ ಹೋಗಿ ನೋಡಿದಾಗ ಐವರ ಶವ ಪತ್ತೆಯಾಗಿತ್ತು.

ಈ ವೇಳೆ ಸ್ಥಳೀಯರು ಪೊಲೀಸರ ಬಳಿ, ಮಹಿಳೆಯ ಪತಿ ರಾಮ್ ಡಾಬಾದಲ್ಲಿ ಕೆಲಸ ಮಾಡುತ್ತಿದ್ದು, ಯಾವಾಗಲೂ ಮದ್ಯ ಸೇವಿಸುತ್ತಿದ್ದನು. ಪತಿಯ ಕುಡಿತಕ್ಕೆ ಪತ್ನಿ ಶ್ಯಾಮಾ ಬೇಸತ್ತು ಹೋಗಿದ್ದಳು. ಪತಿ- ಪತ್ನಿ ನಡುವೆ ಯಾವಾಗಲೂ ಜಗಳವಾಗುತ್ತಿತ್ತು. ನಾಲ್ಕು ದಿನದ ಹಿಂದೆಯೂ ಪತಿ-ಪತ್ನಿ ನಡುವೆ ಜಗಳವಾಗಿದ್ದು, ಈ ಘಟನೆ ನಂತರ ಪತಿ ರಾಮ್ ನಾಪತ್ತೆ ಆಗಿದ್ದನು. ಕೆಲವು ದಿನಗಳಿಂದ ಈ ಮನೆಯ ಬಾಗಿಲು ಲಾಕ್ ಆಗಿದ್ದು, ಕುಟುಂಬಸ್ಥರು ಮನೆಯ ಹೊರಗೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ ಎಂದು ಮಾಹಿತಿ ನೀಡಿದರು.

ಸದ್ಯ ಪೊಲೀಸರು ಬಾಗಿಲನ್ನು ಒಡೆದು ಒಳಗೆ ಹೋದಾಗ ರೂಮಿನಲ್ಲಿ ವಿಷದ ಪುಡಿ ದೊರೆಯಿತು. ಬಾಗಿಲು ಒಳಗಿನಿಂದ ಲಾಕ್ ಆಗಿದ್ದ ಕಾರಣ ತಾಯಿ- ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿಯಿತು. ಶ್ಯಾಮಾ ಕಾಲೇಜ್‍ವೊಂದರಲ್ಲಿ ಅಡುಗೆ ಮಾಡುವ ಕೆಲಸ ಮಾಡುತ್ತಿದ್ದಳು. ಇತ್ತ ರಾಮ್ ತನ್ನ ಹಣವನ್ನೆಲ್ಲಾ ಕುಡಿತಕ್ಕಾಗಿ ಬಳಸಿಕೊಳ್ಳುತ್ತಿದ್ದನು. ಹೀಗಾಗಿ ಶ್ಯಾಮಾ ತನ್ನ ಮನೆಯ ಖರ್ಚು ಹಾಗೂ ನಾಲ್ವರು ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಳ್ಳುತ್ತಿದ್ದಳು.

ಸ್ಥಳೀಯರ ಪ್ರಕಾರ, ರಾಮ್ ಮದ್ಯ ಸೇವಿಸಿ ತನ್ನ ಪತ್ನಿ ಬಳಿ ಹಣ ಕೇಳುತ್ತಿದ್ದನು. ಪತ್ನಿ ಹಣ ಕೊಡದೆ ಇದ್ದಾಗ ಆತ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದನು. ಶ್ಯಾಮಾ ತನ್ನ ಹಿರಿಯ ಮಗಳ ಮದುವೆ ಬಗ್ಗೆ ತುಂಬಾ ಯೋಚಿಸುತ್ತಿದ್ದಳು ಎಂದು ಹೇಳಿದರು.

Comments are closed.