ರಾಷ್ಟ್ರೀಯ

ಕೊರೊನ ವೈರಸ್‌: ಕಟ್ಟೆಚ್ಚರ ವಹಿಸಲು ಮೋದಿ ಸೂಚನೆ

Pinterest LinkedIn Tumblr


ಹೊಸದಿಲ್ಲಿ: ಜಾಗತಿಕವಾಗಿ ಹಬ್ಬುತ್ತಿರುವ ಕೊರೊನ ವೈರಸ್‌ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ.

ದೇಶದಲ್ಲಿಯೂ ವೈರಸ್‌ ಹಬ್ಬುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ನರೇಂದ್ರ ಮೋದಿ, ಶನಿವಾರ ಸಂಜೆ ಉನ್ನತಾಧಿಕಾರಿಗಳ ಜತೆ ಸುದೀರ್ಘ ಸಮಾಲೋಚನೆ ನಡೆಸಿದರು.

ಚೀನಾದಿಂದ ಹಾಗೂ ಇತರೆ ದೇಶಗಳಿಂದ ಬರುತ್ತಿರುವ ಪ್ರಯಾಣಿಕರನ್ನು ತೀವ್ರ ತಪಾಸಣೆಗೊಳಪಡಿಸಲಾಗುತ್ತಿದೆ ಎಂದ ಅಧಿಕಾರಿಗಳು ಈ ಸಂದರ್ಭದಲ್ಲಿ ಮೋದಿಗೆ ಮಾಹಿತ ನೀಡಿದರು.

ಆರೋಗ್ಯ ಸಚಿವಾಲಯ, ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಸಂಬಂಧಪಟ್ಟ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳು, ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಕ್ಷಿಪ್ರ ಕಾರ್ಯಪಡೆ ತಂಡಗಳನ್ನು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸವಂತೆ ಸೂಚಿಸಲಾಗಿದೆ.

ಕಳೆದ ಒಂದು ವಾರದಿಂದ ಭಾರಿ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಲಾಗಿದೆ.

ಇದುವರೆಗೆ ಒಟ್ಟು 115 ವಿಮಾನಗಳಿಂದ ಆಗಮಿಸಿದ 20 ಸಾವಿರಕ್ಕೂ ಹೆಚ್ಚು ಪ್ರಯಾಣಿಕರನ್ನು ಕೊರೋನ ವೈರಸ್ ಸೋಂಕಿನ ಲಕ್ಷಣಗಳ ಪತ್ತೆಗಾಗಿ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಈವರೆಗೆ ದೇಶದಲ್ಲಿ ಕೋರೋನ ವೈರಸ್ ಸೋಂಕು ಪತ್ತೆಯಾಗಿಲ್ಲ. ಆದರೂ ಮೂವರ ಬಗ್ಗೆ ನಿಗಾ ವಹಿಸಲಾಗಿದೆ. ಅವರಲ್ಲಿ ಇಬ್ಬರು ಚೀನಾ ಪ್ರವಾಸ ಕೈಗೊಂಡಿದ್ದರು. ಅವರನ್ನು ಮುಂಬೈನ ಕಸ್ತೂರಬಾ ಆಸ್ಪತ್ರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ದಾಖಲಿಸಲಾಗಿದೆ ಎಂದು ಸಭೆಯಲ್ಲಿ ವಿವರಿಸಲಾಗಿದೆ.

ಈಗಿರುವ 7 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳೊಂದಿಗೆ ಇನ್ನೂ 12 ನಿಲ್ದಾಣಗಳಲ್ಲಿ ತಪಾಸಣಾ ಘಟಕಗಳನ್ನು ಆರಂಭಿಸಲು ಆದೇಶಿಸಲಾಗಿದೆ.

ಇತ್ತೀಚೆಗೆ ಚೀನಾದ ವುಹಾನ್‌ನಲ್ಲಿ ಈ ಸೋಂಕು ಇರುವುದು ದೃಢಪಟ್ಟಿದೆ. ಈ ಮಧ್ಯೆ, ಕೊರೊನ ವೈರಸ್ ಸೋಂಕಿನಿಂದಾಗಿ 237 ತೀವ್ರ ಪರಿಸ್ಥಿತಿ ಸೇರಿದಂತೆ 1,287 ನ್ಯುಮೋನಿಯಾ ಪ್ರಕರಣಗಳು ದೃಢಪಟ್ಟಿವೆ ಎಂದು ಚೀನಾದ ಆರೋಗ್ಯ ಇಲಾಖೆ ತಿಳಿಸಿದೆ. ವೈರಸ್ ಸೋಂಕಿನಿಂದಾಗಿ ಚೀನಾದಲ್ಲಿ 41 ಮಂದಿ ಮೃತಪಟ್ಟಿದ್ದು, ಕೇಂದ್ರ ಹುಬೆ ಪ್ರಾಂತ್ಯವೊಂದರಲ್ಲೇ 39 ಮಂದಿ ಸಾವಿಗೀಡಾಗಿದ್ದಾರೆ.

Comments are closed.