ರಾಷ್ಟ್ರೀಯ

ಲೈಕ್ ಗಳ ಹುಚ್ಚಿಗೆ ಜೀವಕಳೆದುಕೊಂಡ ಟಿಕ್‍ಟಾಕ್ ಸ್ಟಾರ್

Pinterest LinkedIn Tumblr


ಕೋಲ್ಕತ್ತಾ: ಇತ್ತೀಚೆಗೆ ಟಿಕ್‍ಟಾಕ್ ಅನ್ನು ಹೆಚ್ಚಾಗಿ ಎಲ್ಲರೂ ಬಳಸುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ಯುವಕ, ಯುವತಿಯರು, ವೃದ್ಧರು ಕೂಡ ಟಿಕ್‍ಟಾಕ್‍ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗೆ ಟಿಕ್‍ಟಾಕ್ ವಿಡಿಯೋ ಮೂಲಕ ಹೆಚ್ಚು ಲೈಕ್ಸ್ ಪಡೆಯಲು ಹುಚ್ಚು ಸಾಹಸ ಮಾಡಲು ಹೋಗಿ ಸ್ನೇಹಿತರೆದುರೇ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಪೀಗಂಜ್ ಪ್ರದೇಶದ ಕರೀಮ್ ಶೇಖ್(17) ಮೃತ ಯುವಕ. ಮಂಗಳವಾರ ಈತ ತನ್ನ ಸ್ನೇಹಿರೊಂದಿಗೆ ಸೇರಿ ಟಿಕ್‍ಟಾಕ್ ವಿಡಿಯೋ ಮಾಡುತ್ತಿದ್ದ ವೇಳೆ ಮೃತಪಟ್ಟಿದ್ದಾನೆ. ಟಿಕ್‍ಟಾಕ್‍ನಲ್ಲಿ ಸದಾ ಮುಳುಗಿರುತ್ತಿದ್ದ ಶೇಖ್ ಯಾವಾಗಲೂ ವಿಡಿಯೋ ಮಾಡುವುದರಲ್ಲೇ ಬ್ಯುಸಿಯಾಗಿರುತ್ತಿದ್ದನು. ಎಂದಿನಂತೆ ಮಂಗಳವಾರ ಕೂಡ ಸ್ನೇಹಿತರೊಂದಿಗೆ ಸೇರಿ ವಿಡಿಯೋ ಮಾಡಲು ಮುಂದಾಗಿದ್ದನು. ಆದರೆ ಟಿಕ್‍ಟಾಕ್‍ನಲ್ಲಿ ಹೆಚ್ಚು ಲೈಕ್ಸ್ ಪಡೆಯಲು ಶೇಖ್ ಹುಚ್ಚು ಸಾಹಸಕ್ಕೆ ಕೈಹಾಕಿದನು. ಇದಕ್ಕೆ ಆತನ ಮೂವರು ಅಪ್ರಾಪ್ತ ಸ್ನೇಹಿತರು ಕೂಡ ಸಾಥ್ ಕೊಟ್ಟಿದ್ದರು.

ಗ್ರಾಮದಲ್ಲಿದ್ದ ಒಂದು ವಿದ್ಯುತ್ ಕಂಬಕ್ಕೆ ನನ್ನನ್ನು ಹಗ್ಗದಿಂದ ಕಟ್ಟಿ ಹಾಕಿ, ಮುಖಕ್ಕೆ ಪ್ಲಾಸ್ಟಿಕ್ ಕವರ್ ಕಟ್ಟಿ. ಅದನ್ನು ನಾನು ಬಿಚ್ಚುತ್ತೇನೆ. ಈ ದೃಶ್ಯವನ್ನು ವಿಡಿಯೋ ಮಾಡಿ ಎಂದು ಶೇಖ್ ಸ್ನೇಹಿತರಿಗೆ ತಿಳಿಸಿದ್ದನು. ಆದ್ದರಿಂದ ಸ್ನೇಹಿತರು ಶೇಖ್ ಹೇಳಿದಂತೆ ಆತನನ್ನು ಕಟ್ಟಿ ಹಾಕಿ ವಿಡಿಯೋ ಮಾಡುತ್ತಿದ್ದರು. ಈ ವೇಳೆ ಮುಖಕ್ಕೆ ಪ್ಲಾಸ್ಟಿಕ್ ಕಟ್ಟಿದ್ದ ಪರಿಣಾಮ ಶೇಖ್‍ಗೆ ಉಸಿರಾಡಲು ಆಗದೆ ನರಳಾಡುತ್ತಿದ್ದನು. ಆದರೆ ಆತನ ಸ್ನೇಹಿತರು ವಿಡಿಯೋ ಚೆನ್ನಾಗಿ ಆಗಲೆಂದು ಶೇಖ್ ನಟನೆ ಮಾಡುತ್ತಿದ್ದಾನೆ ಅಂದುಕೊಂಡರು. ಹೀಗೆ ವಿಡಿಯೋ ಮಾಡುತ್ತಿದ್ದ ವೇಳೆಯೇ ಶೇಖ್ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಎಷ್ಟೇ ಹೊತ್ತು ವಿಡಿಯೋ ಮಾಡಿದರೂ ಶೇಖ್ ಯಾಕೆ ಹಗ್ಗ ಕಟ್ಟಿದ್ದನ್ನ ಬಿಡಿಸಿಕೊಳ್ಳುತ್ತಿಲ್ಲ ಎಂದು ಸ್ನೇಹಿತರು ಹತ್ತಿರ ಹೋಗಿ ನೋಡಿದಾಗ ಆತ ಮೃತಪಟ್ಟಿರುವುದು ತಿಳಿದಿದೆ. ಇದರಿಂದ ಗಾಬರಿಗೊಂಡ ಮೂವರು ಸ್ನೇಹಿತರು ಮೃತದೇಹವನ್ನ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳೀಯರು ಶೇಖ್‍ನನ್ನು ಗಮನಿಸಿ ತಕ್ಷಣ ಆತನನ್ನು ಆಸ್ಪತ್ರೆಗೆ ರವಾನಿಸಿದರು. ಆದರೆ ಶೇಖ್ ಸಾವನ್ನಪ್ಪಿದ್ದಾನೆ ಎಂದು ವೈದರು ತಿಳಿಸಿದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Comments are closed.