ರಾಷ್ಟ್ರೀಯ

ನಿರ್ಭಯಾ ಪ್ರಕರಣದ ಇಬ್ಬರು ಅಪರಾಧಿಗಳ ಕ್ಯುರೇಟಿವ್ ಅರ್ಜಿ ವಜಾಗೊಳಿಸಿದ ಸುಪ್ರೀಂ

Pinterest LinkedIn Tumblr


ನವದೆಹಲಿ: ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ದೋಷಿಗಳಾದ ವಿನಯ್ ಕುಮಾರ್ ಶರ್ಮಾ ಮತ್ತು ಮುಖೇಶ್ ಮರಣ ದಂಡನೆ ಶಿಕ್ಷೆ ವಿರುದ್ಧ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ನಿರ್ಭಯಾ ಪ್ರಕರಣದಲ್ಲಿ ಕೊನೆಯ ಕಾನೂನು ಅವಕಾಶ ಬಳಸಿಕೊಂಡು ಗಲ್ಲುಶಿಕ್ಷೆ ಪ್ರಶ್ನಿಸಿ ವಿನಯ್ ಕುಮಾರ್ ಮತ್ತು ಮುಖೇಶ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ನ ಜಸ್ಟೀಸ್ ಎನ್ ವಿ ರಮಣ್ ನೇತೃತ್ವದ ಪಂಚಸದಸ್ಯ ಪೀಠ ಇನ್ ಚೇಂಬರ್ ನಲ್ಲಿ ವಿಚಾರಣೆ ನಡೆಸಿ ವಜಾಗೊಳಿಸಿದೆ.

ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ದಿಲ್ಲಿ ಕೋರ್ಟ್ ಡೆತ್ ವಾರಂಟ್ ಹೊರಡಿಸಿತ್ತು. ಅಲ್ಲದೇ 7 ದಿನದೊಳಗೆ ಕೊನೆಯ ಅವಕಾಶವಾಗಿ ಕಾನೂನು ಪ್ರಕಾರ ಕ್ಯುರೇಟಿವ್ ಅರ್ಜಿ ಸಲ್ಲಿಸಬಹುದಾಗಿತ್ತು. ಇನ್ನು ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸುವಂತೆ ಕೋರಿ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಬಹುದಾಗಿದೆ ಎಂದು ವರದಿ ತಿಳಿಸಿದೆ.

ನಾಲ್ವರು ಅಪರಾಧಿಗಳಿಗೆ ದಿಲ್ಲಿಯ ಸಾಕೇತ್ ಕೋರ್ಟ್ ಜನವರಿ 22ರಂದು ಬೆಳಗ್ಗೆ 7ಗಂಟೆಗೆ ಗಲ್ಲಿಗೇರಿಸುವಂತೆ ಡೆತ್ ವಾರಂಟ್ ಹೊರಡಿಸಿತ್ತು. ತಿಹಾರ್ ಜೈಲಿನಲ್ಲಿ ನಾಲ್ವರನ್ನು ಗಲ್ಲಿಗೇರಿಸುವ ಪ್ರಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ ಎಂದು ವರದಿ ವಿವರಿಸಿದೆ.

Comments are closed.