ರಾಷ್ಟ್ರೀಯ

ನಿರ್ಭಯಾ ಪ್ರಕರಣದ ಅಪರಾಧಿಗಳ ನೇಣಿನಿಂದ ಸಿಗುವ ಹಣ ಮಗಳ ಮದುವೆಗೆ: ಪವನ್‌ ಜಲ್ಲಾದ್‌

Pinterest LinkedIn Tumblr


ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಕಾತರದಿಂದ ಕಾಯುತ್ತಿರುವ ಉತ್ತರ ಪ್ರದೇಶ ಮೂಲದ ಹ್ಯಾಂಗ್‌ಮ್ಯಾನ್‌ ಪವನ್‌ ಜಲ್ಲಾದ್‌ ಅವರು ಇದರಿಂದ ತಮಗೆ 1 ಲಕ್ಷ ರೂ. ಹಣ ಸಿಗಲಿದ್ದು, ಅದನ್ನು ಮಗಳ ಮದುವೆ ಬಳಸುವುದಾಗಿ ಹೇಳಿದ್ದಾರೆ. ಹಲವು ತಿಂಗಳಿಂದ ಈ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೆ. ನನ್ನ ಪ್ರಾರ್ಥನೆಗೆ ದೇವರು ದಯ ತೋರಿಸಿದ್ದಾನೆ ಎಂದು ಹೇಳಿದ್ದಾರೆ.

”ನಿರ್ಭಯಾ ಪ್ರಕರಣ ಹೀನಾತಿಹೀನ ಕೃತ್ಯ. ಹಂತಕರನ್ನು ಗಲ್ಲಿಗೇರಿಸುವ ಅವಕಾಶಕ್ಕಾಗಿ ಹಲವು ತಿಂಗಳಿಂದ ಎದುರು ನೋಡುತ್ತಿದ್ದೆ. ನನ್ನ ಪ್ರಾರ್ಥನೆಗೆ ದೇವರು ದಯೆ ತೋರಿಸಿದ್ದಾನೆ. ಸರಕಾರ 1 ಲಕ್ಷ ರೂ. ನೀಡುವುದಾಗಿ ಹೇಳಿದೆ. ಈ ಹಣವನ್ನು ಮಗಳ ಮದುವೆ ಖರ್ಚಿಗೆ ಬಳಸುತ್ತೇನೆ,” ಎಂದು ಹೇಳಿದ್ದಾರೆ. ಮೀರತ್‌ನ ಭೂಮಿಯಾಪುಲ್‌ ನಿವಾಸಿಯಾಗಿರುವ ಜಲ್ಲಾದ್‌ ಅವರಿಗೆ ಜಿಲ್ಲಾಡಳಿತ ನೀಡುತ್ತಿರುವ ಮಾಸಿಕ 5 ಸಾವಿರ ರೂ. ಮಾತ್ರ ಆದಾಯದ ಮೂಲ. ಬೇರೆ ಆದಾಯಗಳಿಲ್ಲ. ಹೀಗಾಗಿ ಅವರಿಗೆ ಈ ಸಿಗುವ ಒಂದು ಲಕ್ಷ ರೂ. ಖುಷಿ ನೀಡಲಿದೆ. ತಿಹಾರ್‌ ಜೈಲು ಅಧಿಕಾರಿಗಳು ಸದ್ಯದಲ್ಲೇ ಅವರನ್ನು ದಿಲ್ಲಿಗೆ ಕರೆದೊಯ್ಯಲಿದ್ದಾರೆ. ಜೈಲಿನಲ್ಲಿ ನೇಣು ಪ್ರಕ್ರಿಯೆ ಕುರಿತು ರಿಹರ್ಸಲ್‌ ನಡೆಸಲಿದ್ದಾರೆ.

ನೇಣಿನಿಂದ ಪಾರಾಗಲು ಅಪರಾಧಿಗಳ ಕೊನೆ ಪ್ರಯತ್ನ
ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳ ಪೈಕಿ ಇಬ್ಬರು ನೇಣಿನಿಂದ ಪಾರಾಗಲು ಕೊನೆ ಪ್ರಯತ್ನವಾಗಿ ಸಲ್ಲಿಸಿರುವ ಕ್ಯುರೇಟಿವ್‌ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಜ.14 ರಂದು ಕೈಗೆತ್ತಿಕೊಳ್ಳಲಿದೆ.

ಅಪರಾಧಿಗಳಾದ ವಿನಯ್‌ ಶರ್ಮಾ ಮತ್ತು ಮುಖೇಶ್‌ ಕುಮಾರ್‌ ಸಲ್ಲಿಸಿರುವ ಕ್ಯುರೇಟಿವ್‌ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಎನ್‌.ವಿ. ರಮಣ, ಅರುಣ್‌ ಮಿಶ್ರಾ, ಆರ್‌.ಎಫ್‌.ನಾರಿಮನ್‌, ಆರ್‌.ಭಾನುಮತಿ ಮತ್ತು ಅಶೋಕ್‌ ಭೂಷಣ್‌ ನೇತೃತ್ವದ ಪಂಚ ಸದಸ್ಯ ಪೀಠ ವಿಚಾರಣೆ ನಡೆಸಲಿದೆ. ಆದರೆ ಹೀನಾತಿಹೀನ ಕೃತ್ಯದಲ್ಲಿ ವಿನಯ್‌ ಶರ್ಮಾ, ಮುಖೇಶ್‌ ಕುಮಾರ್‌ ಭಾಗಿಯಾಗಿದ್ದರಿಂದ ಅವರಿಬ್ಬರ ಈ ಅರ್ಜಿಗಳನ್ನು ಕೋರ್ಟ್‌ ತಿರಸ್ಕರಿಸುವುದೇ ಹೆಚ್ಚು ಎನ್ನಲಾಗಿದೆ.

ಪಾತಕಿಗಳು 2012ರಲ್ಲಿ ದಿಲ್ಲಿಯ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಚಲಿಸುವ ಬಸ್‌ನಲ್ಲಿಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಸಾವಿಗೆ ಕಾರಣವಾಗಿದ್ದರು. ನಾಲ್ಕು ಅಪರಾಧಿಗಳ ಗಲ್ಲುಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು. ಕಳೆದ ವಾರ ದಿಲ್ಲಿಯ ಪಟಿಯಾಲ ಹೌಸ್‌ ಕೋರ್ಟ್‌ ಈ ಸಂಬಂಧ ಡೆತ್‌ ವಾರೆಂಟ್‌ ಜಾರಿಗೊಳಿಸಿ ಜ.22 ರಂದು ಬೆಳಿಗ್ಗೆ 7 ಗಂಟೆಗೆ ತಿಹಾರ್‌ ಜೈಲಿನಲ್ಲಿ ಅಪರಾಧಿಗಳನ್ನು ನೇಣಿಗೇರಿಸಲು ಸಮಯ ನಿಗದಿ ಮಾಡಿದೆ.

Comments are closed.