ರಾಷ್ಟ್ರೀಯ

ಹಾಸ್ಟೆಲ್ ಮಾಲೀಕನ ಅಪ್ರಾಪ್ತ ಪುತ್ರನಿಂದ ಯುವತಿಯ ಅತ್ಯಾಚಾರ

Pinterest LinkedIn Tumblr


ಹೈದರಾಬಾದ್: ಯುವತಿಯ ಮೇಲೆ ಅಪ್ರಾಪ್ತ ಸೇರಿ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಗರದ ಜುಬಿಲಿ ಹಿಲ್ಸ್‌ನಲ್ಲಿ ನಡೆದಿದೆ.

ಡಿಸೆಂಬರ್ 28 ರಂದು ಈ ಘಟನೆ ನಡೆದಿದ್ದು, ಸಂತ್ರಸ್ತೆ ದೂರು ಕೊಟ್ಟ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ:
21 ವರ್ಷದ ಯುವತಿ ಎಲ್ಲಾರೆಡ್ಡಿಗುಡಾದ ಹಾಸ್ಟೆಲ್‍ನಲ್ಲಿ ವಾಸವಾಗಿದ್ದಳು. ಈ ವೇಳೆ ಹಾಸ್ಟೆಲ್ ಮಾಲೀಕನ ಅಪ್ರಾಪ್ತ ಮಗ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದರು. ಇಬ್ಬರು ಸ್ನೇಹಿತರಾಗಿದ್ದರು. ಮಾಲೀಕನ ಮಗನ ಸ್ನೇಹಿತ ಕೂಡ ಸಂತ್ರಸ್ತೆಗೆ ಪರಿಚಯವಾಗಿದ್ದನು.

ಸಂತ್ರಸ್ತೆ 4 ತಿಂಗಳ ಹಿಂದೆ ಹಾಸ್ಟೆಲ್‍ನಿಂದ ಜುಬಿಲಿ ಹಿಲ್ಸ್‌ನ ಫ್ಲ್ಯಾಟ್‍ಗೆ ತೆರಳಿ ತನ್ನ ಸಹೋದರಿಯೊಂದಿಗೆ ವಾಸಿಸುತ್ತಿದ್ದಳು. ಡಿಸೆಂಬರ್ 28 ರಂದು ಹಾಸ್ಟೆಲ್ ಮಾಲೀಕನ ಮಗ ಮತ್ತು ಅವನ ಸ್ನೇಹಿತ ನಿಖಿಲ್ ರೆಡ್ಡಿ (19) ಡ್ರಗ್ಸ್ ತೆಗೆದುಕೊಂಡು ಸಂತ್ರಸ್ತೆಗೆ ಫೋನ್ ಮಾಡಿದ್ದರು. ಆಗ ಸಂತ್ರಸ್ತೆ ಒಬ್ಬಳೇ ಇರುವುದನ್ನು ತಿಳಿದುಕೊಂಡು ಆಕೆಯ ಮನೆಗೆ ಹೋಗಿದ್ದಾರೆ.

ಡ್ರಗ್ಸ್ ಮತ್ತಿನಲ್ಲಿದ್ದ ಹಾಸ್ಟೆಲ್ ಮಾಲೀಕನ ಮಗ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಆತನ ಸ್ನೇಹಿತ ಆ ಕೃತ್ಯವನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ಬಳಿಕ ಆತನ ಸ್ನೇಹಿತ ಕೂಡ ಅತ್ಯಾಚಾರ ಎಸಗಿದ್ದಾನೆ. ನಂತರ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಇಬ್ಬರು ಬೆದರಿಕೆ ಹಾಕಿದ್ದರು.

ಸಂತ್ರಸ್ತೆ ತನ್ನ ಮನೆಗೆ ಹೋಗಿ ಪೋಷಕರ ಬಳಿ ನಡೆದ ವಿಷಯವನ್ನು ಹೇಳಿದ್ದಾಳೆ. ಬಳಿಕ ಪೊಲೀಸ್ ಠಾಣೆಗೆ ಬಂದು ದೂರ ದಾಖಲಿಸಿದ್ದಾಳೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬಂಜಾರ ಹಿಲ್ಸ್ ವಿಭಾಗದ ಎಸಿಪಿ ಕೆ.ಎಸ್.ರಾವ್ ತಿಳಿಸಿದ್ದಾರೆ.

Comments are closed.