ರಾಷ್ಟ್ರೀಯ

ಭಿಕ್ಷೆ ಹಾಕಲು ಹೋಗಿ 10 ಲಕ್ಷ ರೂ. ಕಳೆದುಕೊಂಡ!

Pinterest LinkedIn Tumblr


ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಗುತ್ತಿಗೆದಾರರೊಬ್ಬರು ಭಿಕ್ಷುಕನಿಗೆ ಭಿಕ್ಷೆ ನೀಡಲು ಹೋಗಿ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಭಿಕ್ಷುಕನಿಗೆ 5 ರೂ. ನೀಡಲು ಹೋಗಿ ಗುತ್ತಿಗೆದಾರ ತನ್ನ 10 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ವಾಸ್ತವವಾಗಿ ಪಾಟ್ನಾದ ಕೃಷ್ಣಪುರಿ ಪೊಲೀಸ್ ಠಾಣೆ ಪ್ರದೇಶದ ವ್ಯಾಪ್ತಿಯಲ್ಲಿ, ಗುತ್ತಿಗೆದಾರ ಅಜಯ್ ಕುಮಾರ್ ಸಿಂಗ್ ಅವರು ಕೆನರಾ ಬ್ಯಾಂಕಿನಿಂದ 10 ಲಕ್ಷ ರೂ. ಡ್ರಾ ಮಾಡಿಕೊಂಡು ಆಗಷ್ಟೇ ಹೊರಬಂದಿದ್ದರು. ಅದೇ ಸಮಯದಲ್ಲಿ, ಅಪರಿಚಿತ ಯುವಕ ಗುತ್ತಿಗೆದಾರನ ವಾಹನದಿಂದ 10 ಲಕ್ಷ ರೂ. ತುಂಬಿದ್ದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾನೆ.

ಘಟನೆ ಸುಮಾರು 3 ಗಂಟೆ ವೇಳೆಗೆ ನಡೆದಿದೆ ಎಂದು ಅಜಯ್ ಕುಮಾರ್ ಸಿಂಗ್ ಹೇಳಿದ್ದಾರೆ. ಭಿಕ್ಷುಕ ಮಹಿಳೆಯೊಬ್ಬರು ಕಾರಿನ ಬಳಿಗೆ ಬಂದಾಗ ಅವರು ಬ್ಯಾಂಕಿನಿಂದ ಹಣದೊಂದಿಗೆ ಮನೆಗೆ ಹೋಗುತ್ತಿದ್ದರು, ನಂತರ ಗುತ್ತಿಗೆದಾರ ಮಹಿಳಾ ಭಿಕ್ಷುಕಿಗೆ ಐದು ರೂಪಾಯಿ ನೀಡಲು ಮುಂದಾದರು ಅಷ್ಟರಲ್ಲಿ, ಅಪರಿಚಿತ ವ್ಯಕ್ತಿಯೊಬ್ಬ ಗುತ್ತಿಗೆದಾರ ಅಜಯ್ ಕುಮಾರ್ ಸಿಂಗ್ ಅವರಿಗೆ ನಿಮ್ಮ ಹಣ ಬಿದ್ದಿದೆ ಎಂದು ಹೇಳಿದರು.

ಹಣ ಕೆಳಗೆ ಬಿದ್ದಿದೆ ಎಂದು ಹೇಳಿದೊಡನೆ ಅಜಯ್ ಸಿಂಗ್ ಕಾರಿನಿಂದ ಇಳಿದಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿ ಕಾರಿನ ಹಿಂದಿನ ಸೀಟಿನಲ್ಲಿ ಇಟ್ಟಿದ್ದ 10 ಲಕ್ಷ ರೂ. ಹಣವನ್ನು ಲಪಟಾಯಿಸಿ ಪರಾರಿಯಾದ ಘಟನೆ ನಡೆದಿದೆ. ಗುತ್ತಿಗೆದಾರ ಕೃಷ್ಣಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಸಂಪೂರ್ಣ ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಘಟನೆಯ ಮಾಹಿತಿ ದೊರೆತ ಕೂಡಲೇ ಡಿಎಸ್ಪಿ ರಾಕೇಶ್ ಕುಮಾರ್ ಪ್ರಭಾಕರ್ ಕೂಡ ಸ್ಥಳಕ್ಕೆ ತಲುಪಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಬಂದಿದೆ. ಇಡೀ ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಈ ವಿಷಯ ಬಹಿರಂಗಗೊಳ್ಳಲಿದೆ ಎಂದವರು ಮಾಹಿತಿ ನೀಡಿದ್ದಾರೆ.

Comments are closed.