ರಾಷ್ಟ್ರೀಯ

ನಿರ್ಭಯಾ ಅಪರಾಧಿಗಳ ಅಂಗಾಂಗ ದಾನಕ್ಕೆ ಮನವೊಲಿಸುತ್ತೇವೆ

Pinterest LinkedIn Tumblr


ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಾಲ್ವರು ತಮ್ಮ ದೇಹದ ಅಂಗಾಂಗ ದಾನ ಮಾಡುವಂತೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಭೇಟಿ ಮಾಡಲು ಅನುಮತಿ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಎನ್ ಜಿಒ(RACO) ಸ್ಥಾಪಕ ರಾಹುಲ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಸತೀಶ್ ಕುಮಾರ್ ಆರೋರಾ ವಜಾಗೊಳಿಸಿದ್ದು, ಏನೇ ಕಾರಣವಿರಲಿ ಅರ್ಜಿದಾರರಿಗೆ ಅಪರಾಧಿಗಳನ್ನು ಭೇಟಿಯಾಗುವ ಯಾವ ಅಧಿಕಾರವೂ ಇಲ್ಲ. ಅಲ್ಲದೇ ಜೈಲು ಅಧಿಕಾರಿಗಳಿಗೂ ಕೂಡಾ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಗಲ್ಲುಶಿಕ್ಷೆಗೊಳಗಾದ ಅಪರಾಧಿಗಳ ವಿಚಾರಣೆ ವೇಳೆ ಪಬ್ಲಿಕ್ ಪ್ರಾಸಿಕ್ಯೂಟರ್, ಅಪರಾಧಿಗಳಿಗೆ ನೀಡುವ 14 ದಿನಗಳ ಕಾಲಾವಕಾಶ ಕೇವಲ ಅವರಿಗೆ ಲಭ್ಯವಿರುವ ಕಾನೂನು ಅವಕಾಶ ಬಳಸಿಕೊಳ್ಳುವುದು ಮತ್ತು ಧಾರ್ಮಿಕ ಶ್ಲೋಕಗಳನ್ನು ಹೇಳುವುದು ಎಂಬುದಾಗಿ ವಾದಿಸಿದ್ದರು.

ಈ ಪ್ರಕರಣದಲ್ಲಿ ಭೇಟಿಯಾಗುವ ಯಾವುದೇ ಅಧಿಕಾರ ಇಲ್ಲ. ಒಂದು ವೇಳೆ ಅವರಿಗೆ ಇಂತಹ ಉದಾತ್ತ ಕಾರಣಗಳಿದ್ದರೆ, ನೀವು ಅಪರಾಧಿಗಳ ಕುಟುಂಬದವರನ್ನು ಸಂಪರ್ಕಿಸಬಹುದು. ಯಾಕೆಂದರೆ ಅವರು ಶೀಘ್ರವೇ ಅಪರಾಧಿಗಳನ್ನು ಭೇಟಿಯಾಗಲಿದ್ದು, ಈ ವೇಳೆ ಅಪರಾಧಿಗಳ ಅಪೇಕ್ಷೆ ಏನು ಎಂಬುದನ್ನು ತಿಳಿದುಕೊಳ್ಳಿ ಎಂದು ಕೋರ್ಟ್ ಸೂಚನೆ ನೀಡಿದೆ.

ಒಂದು ವೇಳೆ ನಮಗೆ ಅವರನ್ನು ಭೇಟಿಯಾಗಲು ಅವಕಾಶ ಇಲ್ಲವೆಂದಾದರೆ, ಸರ್ಕಾರವೇ ಅವರ ಕೊನೆಯ ಇಚ್ಛೆ ಏನೆಂದು ತಿಳಿದುಕೊಳ್ಳಲಿ ಎಂದು ಅರ್ಜಿದಾರರ ಪರ ವಕೀಲರು ಪ್ರತಿವಾದಿಸಿರುವುದಾಗಿ ವರದಿ ತಿಳಿಸಿದೆ.

ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದಲ್ಲಿ ದಿಲ್ಲಿ ಕೋರ್ಟ್ ಮಂಗಳವಾರ ನಾಲ್ವರು ಅಪರಾಧಿಗಳ ವಿರುದ್ಧ ಡೆತ್ ವಾರಂಟ್ ಜಾರಿಗೊಳಿಸಿತ್ತು.

Comments are closed.