ರಾಷ್ಟ್ರೀಯ

ಫೂಲನ್ ದೇವಿ ಪ್ರತೀಕಾರದ ಕಥೆ – 1981ರ ಬೆಹಮೈ ಹತ್ಯಾಕಾಂಡದ ಭಯಾನಕ ನೆನಪು

Pinterest LinkedIn Tumblr


ಹಿಂದಿನ ತಲೆಮಾರಿನವರಲ್ಲಿ ಫೂಲನ್ ದೇವಿ ಹೆಸರು ಕೇಳದವರು ವಿರಳ. ಎಂಬತ್ತರ ದಶಕದಲ್ಲಿ ಚಂಬಲ್ ಕಣಿವೆಯನ್ನು ತಲ್ಲಣಗೊಳಿಸಿದ ದರೋಡೆಕೋರರ ಗ್ಯಾಂಗ್​ಗಳಲ್ಲಿ ಫೂಲನ್ ಅವರದ್ದೂ ಒಂದು. 1981ರಲ್ಲಿ ಉತ್ತರ ಪ್ರದೇಶದ ಬೆಹಮೈ ಗ್ರಾಮದಲ್ಲಿ ನಡೆದ ಹತ್ಯಾಕಾಂಡ ಈಗಲೂ ಬೆಚ್ಚಿಬೀಳಿಸುವಷ್ಟು ಘೋರವಾಗಿದೆ. ಆ ವರ್ಷದ ಫೆ. 14ರಂದು ಮೇಲ್ವರ್ಗದ ಠಾಕೂರ್ ಸಮುದಾಯಕ್ಕೆ ಸೇರಿದ 20 ಮಂದಿಯನ್ನು ಸಾಲುಗಟ್ಟಿ ನಿಲ್ಲಿಸಿ ಫೂಲನ್ ದೇವಿ ಮತ್ತಾಕೆಯ ಗ್ಯಾಂಗ್​ನವರು ಶೂಟ್ ಮಾಡಿ ಸಾಯಿಸಿದ್ದರು. ಆ ಪ್ರಕರಣ ಈಗ ನ್ಯಾಯಾಲಯದ ಮೆಟ್ಟಿಲಿನಲ್ಲಿದೆ. ಜನವರಿ 18ಕ್ಕೆ ಕಾನಪುರ ನ್ಯಾಯಾಲಯವು ತೀರ್ಪು ನೀಡಲು ನಿರ್ಧರಿಸಿದೆ.

ಏನಿದು ಪ್ರಕರಣ?

1963ರಲ್ಲಿ ಜನಿಸಿದ್ದ ಫೂಲನ್ ದೇವಿ ಮೇಲ್ವರ್ಗದವರ ದೌರ್ಜನ್ಯಕ್ಕೊಳಗಾಗಿ ದರೋಡೆ, ಸುಲಿಗೆಗೆ ಇಳಿದಿದ್ದವರು. 70, 80 ಮತ್ತು 90ರ ದಶಕದಲ್ಲಿ ಉತ್ತರ ಪ್ರದೇಶ, ಮಧ್ಯ ಪ್ರದೇಶದ ಕಣಿವೆಗಳಲ್ಲಿ ದರೋಡೆಕೋರರ ಗ್ಯಾಂಗ್​ಗಳದ್ದೇ ಪ್ರಾಬಲ್ಯವಿತ್ತು. ಬಡತನ, ದೌರ್ಜನ್ಯಗಳಿಂದ ಬೇಸತ್ತಿದ್ದ ಫೂಲನ್ ದೇವಿ ಸಣ್ಣ ವಯಸ್ಸಲ್ಲೇ ದರೋಡೆಕೋರರ ಗ್ಯಾಂಗ್ ಸೇರಿದ್ದರು. ಆ ಗ್ಯಾಂಗ್​ನಲ್ಲಿದ್ದ ಮೇಲ್ಜಾತಿಯ ವಿಕ್ರಮ್ ಮಲ್ಲಾ ಮೇಲೆ ಫೂಲನ್​ಗೆ ಪ್ರೇಮಾಂಕುರವಾಗುತ್ತದೆ. ಇದು ಆ ಜಾತಿಯ ದರೋಡೆಕೋರರನ್ನು ಕೆರಳಿಸುತ್ತದೆ. ಅವರವರಲ್ಲೇ ಗುಂಡಿನ ಚಕಮಕಿ ನಡೆದು ವಿಕ್ರಮ್ ಮಲ್ಲಾ ಹತ್ಯೆಯಾಗುತ್ತಾನೆ. ಆ ಬಳಿಕ ಗ್ಯಾಂಗ್ ಸದಸ್ಯರಾದ ಲಾಲಾ ರಾಮ್ ಮತ್ತು ಶ್ರೀ ರಾಮ್ ಎಂಬಿಬ್ಬರು ಫೂಲನ್ ದೇವಿಯನ್ನು ಕಿಡ್ನಾಪ್ ಮಾಡಿ ಬೆಹಮೈಗೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ಎಸಗುತ್ತಾರೆ.

ತನ್ನ ಪ್ರಿಯಕರನ ಹತ್ಯೆ ಮತ್ತು ತನ್ನ ಮೇಲಿನ ಅತ್ಯಾಚಾರಕ್ಕೆ ಸೇಡು ತೀರಿಸಿಕೊಳ್ಳಲು ಫೂಲನ್ ನಿಶ್ಚಯಿಸುತ್ತಾರೆ. 1981, ಫೆ. 14, ಪ್ರೇಮಿಗಳ ದಿನದಂದೇ ಅವರು ತಮ್ಮ ಗ್ಯಾಂಗ್ ಸಮೇತ ಬೆಹಮೈ ಗ್ರಾಮಕ್ಕೆ ನುಗ್ಗಿ ಲೂಟಿ ಮಾಡುತ್ತಾರೆ. ತನ್ನನ್ನು ರೇಪ್ ಮಾಡಿದ ಇಬ್ಬರು ಗ್ಯಾಂಗ್​ಸ್ಟರ್​ಗಳು ಸೇರಿದಂತೆ ಠಾಕೂರ್ ಸಮುದಾಯದ 26 ಮಂದಿಯನ್ನು ಸಾಲಿನಲ್ಲಿ ನಿಲ್ಲಿಸಿ ಶೂಟ್ ಮಾಡುತ್ತಾರೆ. ಅವರಲ್ಲಿ 6 ಮಂದಿ ಮಾತ್ರ ಬದುಕುಳಿದು ಮಿಕ್ಕ 20 ಮಂದಿ ಸಾವನ್ನಪ್ಪುತ್ತಾರೆ.

ಈ ಹತ್ಯಾಕಾಂಡ ನಡೆದು ಒಂದೆರಡು ವರ್ಷದಲ್ಲಿ ಫೂಲನ್ ದೇವಿ ಶರಣಾಗುತ್ತಾರೆ. 15 ವರ್ಷಗಳ ಜೈಲುಶಿಕ್ಷೆ ಪಡೆದು ಹೊರಬಂದು ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತಾರೆ. ಎರಡು ಬಾರಿ ಸಂಸದೆ ಕೂಡ ಆಗುತ್ತಾರೆ. ಆದರೆ, 2001ರಲ್ಲಿ ಅವರ ನಿವಾಸದ ಎದುರೇ ಎದುರಾಳಿ ಗ್ಯಾಂಗ್​ನವರಿಂದ ಹತ್ಯೆಯಾಗುತ್ತಾರೆ.

ಆದರೆ, ಬೆಹಮೈ ಹತ್ಯಾಕಾಂಡ ಪ್ರಕರಣ ಈಗಲೂ ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಉಳಿದಿದೆ. ಈ ಪ್ರಕರಣದಲ್ಲಿ 23 ಮಂದಿ ಆರೋಪಿಗಳಾಗಿದ್ಧಾರೆ. ಇವರಲ್ಲಿ ಫೂಲನ್ ದೇವಿ ಸೇರಿದಂತೆ 16 ಜನರು ಈಗಾಗಲೇ ಮೃತಪಟ್ಟಿದ್ದಾರೆ. ಇನ್ನುಳಿದ ಏಳು ಆರೋಪಿಗಳಲ್ಲಿ ಪೋಸಾ ಎಂಬಾತ ಜೈಲು ಶಿಕ್ಷೆ ಅನುಭವಿಸುತ್ತಿದ್ಧಾನೆ. ಭೀಕಾ, ವಿಶ್ವನಾಥ್ ಮತ್ತು ಶ್ಯಾಮಬಾಬು ಅವರು ಜಾಮೀನಿನ ಮೇಲೆ ಹೊರಗಿದ್ಧಾರೆ. ಉಳಿದ ಮೂವರಾದ ಮಾನ್ ಸಿಂಗ್, ರಾಮಕೇಶ್ ಮತ್ತು ವಿಶ್ವನಾಥ್ ಅಕಾ ಅಶೋಕ್ ಅವರು ತಲೆಮರೆಸಿಕೊಂಡು ತಿರುಗುತ್ತಿದ್ಧಾರೆ.

ಪ್ರತೀಕಾರವಲ್ಲ, ಪಕ್ಕಾ ದರೋಡೆ?

ತನ್ನ ಮೇಲಾದ ಅತ್ಯಾಚಾರಕ್ಕೆ ಪ್ರತೀಕಾರವಾಗಿ ತಾನು 20 ಮಂದಿ ಠಾಕೂರರನ್ನು ಹತ್ಯೆಗೈದಿದ್ದು ಎಂದು ಫೂಲನ್ ದೇವಿ ಹೇಳಿಕೊಂಡಿದ್ದರು. ಆದರೆ, ಬೆಹಮೈ ಗ್ರಾಮಸ್ಥರು ಫೂಲನ್ ದೇವಿಯ ಈ ವಾದವನ್ನು ಅಲ್ಲಗಳೆಯುತ್ತಾರೆ. ಅಂದು ವಾಸವಿದ್ದ ಗ್ರಾಮಸ್ಥರು ಹೇಳುವ ಪ್ರಕಾರ ಆಗ ಯಾವುದೇ ಅತ್ಯಾಚಾರ ಘಟನೆ ನಡೆದದ್ದು ಅವರ ಅರಿವಿಗೆ ಬಂದಿರಲಿಲ್ಲವಂತೆ. ಫೂಲನ್ ದೇವಿ ತಮ್ಮ ಗ್ರಾಮವನ್ನು ದರೋಡೆ ಮಾಡಲು ಆಗಮಿಸಿದ್ದರು. ಆಗ ಅವರು 20 ಮಂದಿಯನ್ನು ಗುಂಡಿಟ್ಟು ಹತ್ಯೆಗೈದಿದ್ದರು ಎಂದು ಅವರು ಹೇಳುತ್ತಾರೆ.

ಹೀಗಾಗಿ, ಕಾನುಪುರ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದಿದೆ. ಇವತ್ತು (ಜ. 6) ತೀರ್ಪು ನೀಡಬೇಕಿತ್ತು. ಆದರೆ, ಕೋರ್ಟ್ ಜ. 16ಕ್ಕೆ ತೀರ್ಪು ಮುಂದೂಡಿಕೆ ಮಾಡಿದೆ.

Comments are closed.